ಹಿಂಸೆ ನಿಲ್ಲಿಸಿ: ಯುವ ಕಲಾವಿದರಿಂದ ಬೈಕ್ ಜಾಥಾ

KannadaprabhaNewsNetwork |  
Published : Jun 05, 2025, 02:56 AM ISTUpdated : Jun 05, 2025, 02:57 AM IST
ಚಿತ್ರ :  4ಎಂಡಿಕೆ4 : ಸುಂಟಿಕೊಪ್ಪ ಜೇಸಿಐ ಸಂಸ್ಥೆಯ ವತಿಯಿಂದ ಸ್ವಾಗತಿಸಿ  ಸನ್ಮಾನಿಸಾಯಿತು.  | Kannada Prabha

ಸಾರಾಂಶ

‘ಹಿಂಸೆ ನಿಲ್ಲಿಸಿ’ ಎನ್ನುವ ಸ್ಲೋಗನ್‌ನೊಂದಿಗೆ ಉಡುಪಿಯ ವಿದ್ಯಾರ್ಥಿ ಯುವ ಕಲಾವಿದರಿಬ್ಬರು ಮೋಟಾರು ಬೈಕ್‌ನಲ್ಲಿ ಮೂರು ಸಾವಿರ ಕಿಲೋಮೀಟರ್ ಸುತ್ತಿ ಜಾಗೃತಿ ಮೂಡಿಸುವ ಮಹತ್ತರ ಕಾರ್ಯಕ್ಕೆ ಕೈಹಾಕಿದ್ದಾರೆ.

ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿ.ಮೀ. ಯಾನ । ಇಂದು ಮುಕ್ತಾಯ

ಕನ್ನಡಪ್ರಭ ವಾರ್ತೆ ಮಡಿಕೇರಿ

‘ಹಿಂಸೆ ನಿಲ್ಲಿಸಿ’ ಎನ್ನುವ ಸ್ಲೋಗನ್‌ನೊಂದಿಗೆ ಉಡುಪಿಯ ವಿದ್ಯಾರ್ಥಿ ಯುವ ಕಲಾವಿದರಿಬ್ಬರು ಮೋಟಾರು ಬೈಕ್‌ನಲ್ಲಿ ಮೂರು ಸಾವಿರ ಕಿಲೋಮೀಟರ್ ಸುತ್ತಿ ಜಾಗೃತಿ ಮೂಡಿಸುವ ಮಹತ್ತರ ಕಾರ್ಯಕ್ಕೆ ಕೈಹಾಕಿದ್ದಾರೆ.

ಮೇ 25ರಿಂದ ಆರಂಭಿಸಿರುವ ಈ ಜಾಗೃತಿ ಪಯಣ ನಿರಂತರ 12 ದಿನಗಳ ಬಳಿಕ ಜೂನ್ 5ರಂದು ಉಡುಪಿಯಲ್ಲಿ ಸಮಾಗಮಗೊಳ್ಳಲಿದೆ.

ರಂಗನಿರ್ದೇಶಕ, ಚಿತ್ರ ನಟ, ಬಾಸುಮ ಕೊಡಗು, ಸಂಗೀತ ಕಲಾವಿದೆ ಕಾವ್ಯವಾಣಿ ದಂಪತಿಯ ಪುತ್ರ, ರಂಗಭೂಮಿ, ಚಲನಚಿತ್ರ ನಟ, ಸಂಗೀತ ಸಂಯೋಜಕ, ಮಣಿಪಾಲದ ಮಾಹೆಯ ಮೀಡಿಯಾ ಕಮ್ಯುನಿಕೇಷನ್ ವಿದ್ಯಾರ್ಥಿ ದೃಶಾ ಕೊಡಗು ಮತ್ತು ಉಡುಪಿಯ ಇಂದ್ರಾಳಿಯ ಆರತಿ ಎಂಬವರ ಪುತ್ರ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಉಜ್ವಲ್ ಕಾಮತ್ ಜೊತೆಯಾಗಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋ ಮೀಟರ್ ಬೈಕ್ ಮೂಲಕ ಈ ಸಂದೇಶ ಜಾಥಾವನ್ನು ಕೈಗೊಂಡಿದ್ದಾರೆ.

ಈ ಜಾಗೃತಿ ಪಯಣ ಕುರಿತು ಮಾತನಾಡಿರುವ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು, ಜೆಸಿಐ ಉಡುಪಿ ಸಿಟಿ ಮತ್ತು ಜೆಸಿಐ ಕಟಪಾಡಿ ಈ ರ್‍ಯಾಲಿಯ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಹಿರಿಯ ಜೇಸಿ ಬಾಸುಮ ಕೊಡಗು ಮಾರ್ಗದರ್ಶನದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ 50ಕ್ಕೂ ಹೆಚ್ಚು ಜೇಸಿ ಘಟಕಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.

ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸುವುದಕ್ಕಾಗಿ, 12 ದಿನಗಳ ಬೈಕ್ ಜಾಥಾವನ್ನು ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಹಿಂಸೆಯು ಹಾನಿಯನ್ನುಂಟುಮಾಡುತ್ತದೆ. ಸಂಬಂಧಗಳನ್ನು ಹಾನಿಗೊಳಿಸುತ್ತದೆ. ಸಮುದಾಯಗಳನ್ನು ಅಸ್ಥಿರಗೊಳಿಸುತ್ತದೆ ಮತ್ತು ಆಕ್ರಮಣಶೀಲತೆಯ ಚಕ್ರಗಳನ್ನು ಶಾಶ್ವತಗೊಳಿಸುತ್ತದೆ. ಇದು ನ್ಯಾಯವನ್ನು ದುರ್ಬಲಗೊಳಿಸುತ್ತದೆ ಮತ್ತು ಕಾನೂನು ಮತ್ತು ನೈತಿಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಸಂಭಾಷಣೆ, ಸಹಾನುಭೂತಿ ಮತ್ತು ಮಧ್ಯಸ್ಥಿಕೆಯಂತಹ ರಚನಾತ್ಮಕ ಪರ್ಯಾಯಗಳು ಸಂಘರ್ಷವನ್ನು ಪರಿಹರಿಸಲು ಹೆಚ್ಚು ಪರಿಣಾಮಕಾರಿ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ದೃಶಾ ಕೊಡಗು ಹೇಳಿದ್ದಾರೆ.

ಬುಧವಾರ ಸುಂಟಿಕೊಪ್ಪಕ್ಕೆ ಆಗಮಿಸಿದ ಇವರನ್ನು ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಸ್ವಾಗತಿಸಿ ಸನ್ಮಾನಿಸಾಯಿತು. ಈ ಸಂದರ್ಭ ಪೊಲೀಸ್ ಠಾಣೆಯಲ್ಲಿ ಕೆಲವು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಅವರನ್ನು ಬೀಳ್ಕೊಡಲಾಯಿತು.

ಸುಂಟಿಕೊಪ್ಪ ಜೆಸಿಐ ಅಧ್ಯಕ್ಷ ನಂದಕುಮಾರ್, ಸದಸ್ಯರಾದ ಡೆನಿಸ್ ಡಿಸೋಜ, ಸಂಪತ್ ಕುಮಾರ್, ಫೆಲ್ಸಿ ಡೆನ್ನಿಸ್, ಅರುಣ್ ಕುಮಾರ್, ಪ್ರೀತಂ ಪ್ರಭಾಕರ್, ನಿರಂಜನ್, ಶಶಾಂಕ್ ಹಾಗೂ ಎಎಸ್‌ಐ ಸುರೇಶ್ ಉಪಸ್ಥಿತರಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ