ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿ ರಾಮಲಿಂಗೇಶ್ವರ ದೇವಸ್ಥಾನದಿಂದ ನೂರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಧೀಕ್ಷಕ ಅಭಿಯಂತರ ಬಿ.ಎಸ್.ಪಾಟೀಲರವರಿಗೆ ಮನವಿ ಸಲ್ಲಿಸಿದರು.ವಿಜಯಪುರ ಜಿಲ್ಲೆಯ ಆಲಮಟ್ಟಿ ಮುಖ್ಯ ಅಭಿಯಂತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ರೈತ ಸಂಘಟನೆಗಳು, ಐದು ನದಿಗಳು ಹರಿಯುವ ಪ್ರದೇಶವಾಗಿದ್ದರೂ ವಿಜಯಪುರ ಜಿಲ್ಲೆ ನಿರಂತರ ಬರಗಾಲಕ್ಕೆ ತುತ್ತಾಗುತ್ತಿದೆ. ಪಂಚನದಿಗಳ ಬೀಡು, ಎರಡನೇ ಪಂಜಾಬ್ ಎಂದೇ ಹೆಸರಾಗಿರುವ ಅವಳಿ ಜಿಲ್ಲೆಗಳ ರೈತರಿಗೆ ನದಿಗಳ ನೀರಿನ ಸಮರ್ಪಕ ಪ್ರಯೋಜನ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿವೆ.ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಲಿಂಗರಾಜು ಆಲೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ್ ಬಿರಾದಾರ ಮಾತನಾಡಿ, ಈ ವರ್ಷ ಸ್ಥಳೀಯ ಭಾಗದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾದ ಕಾರಣ ಆಲಮಟ್ಟಿ ಜಲಾಶಯ ಭರ್ತಿಯಾಗಿತ್ತು. ಇದರಿಂದ ಬೇಸಿಗೆಯವರೆಗೂ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿನ ತೊಂದರೆಯಾಗುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರ ನಿರಾಸೆ ಮೂಡಿಸಿದೆ.ಮುಂಗಾರು ಬೆಳೆಗಳಿಗೆ ಸಮರ್ಪಕ ನೀರು ಒದಗಿಸದ ಸರ್ಕಾರ, ಕೆರೆಗಳಿಗೂ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಿಲ್ಲ. ಇದೀಗ ಹಿಂಗಾರು ಬೆಳೆಗಳಿಗೂ ನೀರು ನೀಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿರುವುದು ರೈತ ವಿರೋಧಿ ಕ್ರಮವಾಗಿದೆ ಎಂದು ಸಂಘಟನೆಗಳು ಆರೋಪಿಸಿದರು
.ಕಳೆದ ತಿಂಗಳು 15 ರಂದು ಬೆಂಗಳೂರಿನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಹಿಂಗಾರು ಬೆಳೆಗಳಿಗೆ ನೀರು ಹರಿಸದಿರಲು ನಿರ್ಧರಿಸಲಾಗಿದೆ. ಆದರೆ, ಮತ್ತೊಂದೆಡೆ ಕಳೆದ 12-13 ದಿನಗಳಿಂದ ಆಲಮಟ್ಟಿ ಜಲಾಶಯದಿಂದ ಕೆಪಿಸಿಎಲ್ ಮೂಲಕ ಪ್ರತಿದಿನ 17 ಸಾವಿರದಿಂದ 20 ಸಾವಿರ ಕ್ಯೂಸೆಕ್ವರೆಗೆ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಈಗಾಗಲೇ ತೆಲಂಗಾಣ ರಾಜ್ಯಕ್ಕೆ ನದಿ ಪಾತ್ರದ ಮೂಲಕ 7 ಟಿಎಂಸಿಗಿಂತಲೂ ಅಧಿಕ ನೀರು ಹರಿಸಲಾಗಿದೆ. ಇದರಿಂದ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇದೇ ರೀತಿ ಪ್ರತಿದಿನ ನೀರನ್ನು ನಾರಾಯಣಪುರಕ್ಕೆ ಹರಿಸುತ್ತಿದ್ದರೆ ಆಲಮಟ್ಟಿ ಜಲಾಶಯ ಬರಿದಾಗಿ, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ರೈತರ ಬೆಳೆಗಳಿಗೆ ನೀರು ನಿರಾಕರಿಸಿ, ಬೇರೆ ರಾಜ್ಯಗಳಿಗೆ ನೀರು ಹರಿಸುತ್ತಿರುವುದು ಅವಳಿ ಜಿಲ್ಲೆಯ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಲಕ್ಷಾಂತರ ಎಕರೆ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿವೆ. ಆದರೂ ಈ ಭಾಗದ ರೈತರಿಗೆ ನೀರಾವರಿ ವಿಚಾರದಲ್ಲಿ ಇನ್ನೂ ನ್ಯಾಯ ದೊರೆತಿಲ್ಲ. ತೆಲಂಗಾಣ ರಾಜ್ಯವು ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ನ್ಯಾಯಾಧಿಕರಣದ ತೀರ್ಪಿನಂತೆ 524.256 ಮೀಟರ್ಗೆ ನಿಗದಿಪಡಿಸುವ ವಿಚಾರಕ್ಕೆ ಅಡ್ಡಿಪಡಿಸಿದ್ದಲ್ಲದೇ, ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ಇಂತಹ ಸಂದರ್ಭದಲ್ಲಿ ಆ ರಾಜ್ಯಕ್ಕೆ ಕರ್ನಾಟಕದ ನೀರನ್ನು ಹರಿಸುವುದಕ್ಕೆ ಸರ್ಕಾರ ಯಾವ ಆಧಾರದಲ್ಲಿ ಮುಂದಾಗಿದೆ ಎಂದು ಪ್ರಶ್ನಿಸಿದರು.ತೆಲಂಗಾಣ ರಾಜ್ಯಕ್ಕೆ ನೀರಿನ ಅಗತ್ಯವಿದ್ದರೆ ಮೊದಲು ನ್ಯಾಯಾಧಿಕರಣದ ತೀರ್ಪಗೆ ಸಂಬಂಧಿಸಿದ ಪ್ರಕರಣವನ್ನು ಹಿಂಪಡೆಯಬೇಕು. ನಂತರ ಕರ್ನಾಟಕದಲ್ಲಿ ಹೆಚ್ಚುವರಿ ನೀರು ಲಭ್ಯವಿದ್ದರೇ ಮಾತ್ರ ನೀರು ನೀಡುವ ಕುರಿತು ಚಿಂತಿಸಬಹುದು. ಅಲ್ಲಿಯವರೆಗೆ ತೆಲಂಗಾಣಕ್ಕೆ ಒಂದು ಹನಿ ನೀರನ್ನೂ ಹರಿಸಬಾರದು ಎಂದು ರೈತ ಸಂಘಟನೆಗಳು ಒತ್ತಾಯಿಸಿದರು.ವಿಶೇಷವಾಗಿ ತೊಗರಿ, ಹತ್ತಿ, ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆಗಳಿಗೆ ಸದ್ಯ ತುರ್ತಾಗಿ ನೀರಿನ ಅಗತ್ಯವಿದೆ. ಹೀಗಾಗಿ ಕೆಪಿಸಿಎಲ್ ಮೂಲಕ ನಾರಾಯಣಪುರಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣ ಸ್ಥಗಿತಗೊಳಿಸಿ, ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಗಳ ಎಲ್ಲ ಕಾಲುವೆಗಳಿಗೆ ಡಿ.30 ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿವೆ.ಅವಳಿ ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ಬೇರೆ ರಾಜ್ಯಗಳಿಗೆ ನೀರು ಹರಿಸುವುದನ್ನು ಮುಂದುವರಿಸಿದರೇ ರಾಜ್ಯ ಸರ್ಕಾರ ರೈತರ ತೀವ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ. ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಆಲಮಟ್ಟಿಯ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರರ ಕಚೇರಿ ಎದುರು ಮೂರು ರೈತ ಸಂಘಟನೆಗಳ ನೇತೃತ್ವದಲ್ಲಿ ಜಂಟಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ, ರಾಮನಗೌಡ ಹಾದಿಮನಿ, ಹೊನಕೆರೆಯಪ್ಪ ತೆಲಗಿ, ಲಿಂಗರಾಜು ಆಲೂರು, ಮಲ್ಲಿಕಾರ್ಜುನ ಬಟಗಿ, ಬಸಯ್ಯ ಮಠ, ವೆಂಕಟೇಶ ಬಸವರಾಜ ಹೊಸಳ್ಳಿ, ಗುರುಲಿಂಗಪ್ಪ ಪಡಸಲಗಿ, ಲಾಲಪ್ಪ ಲಮಾಣಿ, ರಾಜಸಾಬ ವಾಲಿಕಾರ್, ಶಿವಪ್ಪ ಸುಂಟ್ಯಾಳ ಬಾಬು, ಜಲಾಲಸಾಬ್ ಮುಲ್ಲಾ, ದಾವಲ್ಸಾಬ್ ನದಾಫ್, ಗಿರಿ ಮಲ್ಲಪ್ಪ ದೊಡ್ಡಮನಿ, ಸಿದ್ದಪ್ಪ ಮುರಾಳ, ಯಮನಪ್ಪ ಮಾದರ, ರಾಮಣ್ಣ ಮನ್ನಾಳ, ಯಮುನಪ್ಪ ಚಿಗುರಿ, ಸಂಗಪ್ಪ ಮಾದರ, ಸೋಮಪ್ಪ ಶಿವಣಗಿ, ಮಲ್ಲನಗೌಡ ಬಿರಾದಾರ, ಕಲ್ಲಪ್ಪಗೌಡ ಬಿರಾದಾರ, ಬಸಯ್ಯ ಹಿರೇಮಠ, ಹನುಮಂತ ನಾಟಿಕರ, ಮುತ್ತಪ್ಪ ಜಂಬಿಗಿ, ಮಾನಿರ್ಂಗ್ ಹಿರೇಮಠ, ಶಿವಾನಂದ ಉದ್ನಾಳ, ಹನುಮಂತರಾಯ ಹಂದ್ರಾಳ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.