ಶಿವಮೊಗ್ಗ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಾಗರಿಕರ ಸಮಸ್ಯೆಗಳನ್ನು ಮರೆತು ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆ ತಡೆಯಲು ರಾಷ್ಟ್ರಪತಿಗಳು ಮಾರ್ಗಸೂಚನೆ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೋಮುವಾದಿಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ. ಇದನ್ನು ಮಣಿಸಲು ಪ್ರಗತಿಪರ ಮತ್ತು ಅಹಿಂದ ದಲಿತ ಸಂಘಟನೆಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ದೃಷ್ಟಿಯಿಂದ ಮುಡಾದಂತಹ ಹಗರಣ ಹುಟ್ಟು ಹಾಕಿವೆ ಎಂದು ದೂರಿದರು.ಕೂಡಲೇ ಬೀದಿ ರಂಪಾಟದಲ್ಲಿ ತೊಡಗಿರುವ, ದ್ವೇಷ ರಾಜಕೀಯ ಮಾಡುತ್ತಿರುವ, ನಾಡಿನ ಸಮಸ್ಯೆಗಳನ್ನು ಮರೆತಿರುವ ದುಷ್ಟ ರಾಜಕಾರಣಕ್ಕೆ ಕಡಿವಾಣ ಹಾಕಿ ಪ್ರಜಾಪ್ರಭುತ್ವ ರಕ್ಷಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿ. ನಾಗರಾಜ್, ಎಲ್. ರಾಜು, ಅಣ್ಣಯ್ಯ, ಜಗದೀಶ್, ವಿರೂಪಾಕ್ಷಪ್ಪ ಮತ್ತಿತರರು ಇದ್ದರು.