ನೂತನ ಜ್ಞಾನಸಿರಿ ಕ್ಯಾಂಪಸ್ ಗೆ ಸಾರಿಗೆ ಬಸ್ ವ್ಯವಸ್ಥೆ

KannadaprabhaNewsNetwork |  
Published : Oct 23, 2024, 12:42 AM ISTUpdated : Oct 23, 2024, 12:43 AM IST
೨೨ ಟಿಎಂಕೆ ೨ - ತುಮಕೂರಿನಲ್ಲಿ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹಾಗೂ ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರೊಂದಿಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಜೊತೆ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ತುಮಕೂರು ವಿವಿಯ ನೂತನ ಬಿದರಕಟ್ಟೆ ಕ್ಯಾಂಪಸ್‌ಗೆ ಕೆಲ ವಿಷಯಗಳ ಸ್ಥಳಾಂತರಗೊಂಡಿವೆ. ಅಲ್ಲಿಗೆ ತೆರಳಲು ವಿದ್ಯಾರ್ಥಿಗಳಿಗೆ ಸಾರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಇಂದು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳನ್ನು ಮುರುಳೀಧರ ಹಾಲಪ್ಪ ಮತ್ತು ನಾವು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ಸಹ ಸ್ಪಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಕುಣಿಗಲ್ ರಸ್ತೆಯ ಬಿದರಕಟ್ಟೆ ಬಳಿ ಇರುವ ತುಮಕೂರು ವಿವಿ ನೂತನ ಕ್ಯಾಂಪಸ್ ಜ್ಞಾನಸಿರಿಗೆ ತುಮಕೂರು ನಗರದಿಂದ ವಿದ್ಯಾರ್ಥಿಗಳು ತೆರಳಲು ಆಗಿರುವ ಸಾರಿಗೆ ಸಮಸ್ಯೆ ಕುರಿತಂತೆ ಇಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹಾಗೂ ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಜೊತೆ ಚರ್ಚೆ ನಡೆಸಿದರು.

ಮಂಗಳವಾರ ಬೆಳಗ್ಗೆ ದೇವರಾಜ ಅರಸು ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಭೇಟಿಯಾಗಿ ನೂತನ ಕ್ಯಾಂಪಸ್‌ಗೆ ತೆರಳಲು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತಂತೆ ಚರ್ಚೆ ನಡೆಸಿ, ಪರಿಹರಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ನಲ್ಲಿ ಅ. ೨೧ ರಿಂದ ವಿಜ್ಞಾನಕ್ಕೆ ಸಂಬಂಧಿಸಿದ ೧೨ ವಿಷಯಗಳ ಪಾಠ, ಪ್ರವಚನಗಳು ಆರಂಭಗೊಂಡಿವೆ. ತುಮಕೂರು ನಗರದಿಂದ ಜ್ಞಾನಸಿರಿ ಕ್ಯಾಂಪಸ್ ಸುಮಾರು ೧೮ ಕಿಮೀ ದೂರದಲ್ಲಿದ್ದು, ಕುಣಿಗಲ್- ತುಮಕೂರು ರಸ್ತೆಯ ನಾಗವಲ್ಲಿ ಗ್ರಾಮದಿಂದ ೨.೫.ಕಿಮೀ ದೂರ ಇದೆ. ವಿವಿಗೆ ತನ್ನದೇ ಆದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನೇ ಆಶ್ರಯಿಸಬೇಕಾಗಿದೆ. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕ್ಯಾಂಪಸ್ ತಲುಪಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಕೆ.ಎಸ್. ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿಯಾಗಿ ಅವರಿಗೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಮನವರಿಕೆ ಮಾಡಿಕೊಡಲಾಗಿದೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಬಸ್ ವ್ಯವಸ್ಥೆಯಾಗಲಿದೆ ಎಂಬ ಭರವಸೆಯಿದೆ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ತುಮಕೂರು ವಿವಿಯ ನೂತನ ಬಿದರಕಟ್ಟೆ ಕ್ಯಾಂಪಸ್‌ಗೆ ಕೆಲ ವಿಷಯಗಳ ಸ್ಥಳಾಂತರಗೊಂಡಿವೆ. ಅಲ್ಲಿಗೆ ತೆರಳಲು ವಿದ್ಯಾರ್ಥಿಗಳಿಗೆ ಸಾರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಇಂದು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳನ್ನು ಮುರುಳೀಧರ ಹಾಲಪ್ಪ ಮತ್ತು ನಾವು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ಸಹ ಸ್ಪಂದಿಸಿದ್ದಾರೆ. ಪ್ರತಿದಿನ ೯ ಗಂಟೆಯಿಂದ ೧೧ ಗಂಟೆಯವರೆಗೆ ಐದು ಬಸ್ ಮತ್ತು ಸಂಜೆ ೩ ಗಂಟೆಯಿಂದ ೫ ಗಂಟೆಯವರೆಗೆ ಐದು ಬಸ್ಸುಗಳನ್ನು ಓಡಿಸಲು ಒಪ್ಪಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಿಸಲು ಸಹ ಒಪ್ಪಿದ್ದಾರೆ. ಇದಕ್ಕಾಗಿ ಮುರುಳೀಧರ ಹಾಲಪ್ಪ ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಾಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ತುಮಕೂರು ವಿವಿಯ ಕೋರಿಕೆ ಮೇರೆಗೆ ಸೋಮವಾರದಿಂದ ಎರಡು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ವಿವಿ ಕ್ಯಾಂಪಸ್‌ಗೆ ಓಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣ ಕೆಲ ತೊಂದರೆಯಾಗಿತ್ತು. ಇಂದು ವಿವಿ ಕುಲಪತಿಗಳು ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳು ತಮಗಾಗುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಹಾಗಾಗಿ ಇಂದಿನಿಂದ ಪ್ರತಿ ಅರ್ಧ ಗಂಟೆಗೆ ಒಂದು ಬಸ್‌ನಂತೆ ಬೆಳಗ್ಗೆ ೯ ರಿಂದ ಮಧ್ಯಾಹ್ನ ೧೨ ರವರೆಗೆ ಮತ್ತು ಮಧ್ಯಾಹ್ನ ೩ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಐದು ಟ್ರಿಫ್ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಜ್ಞಾನಸಿರಿ ಕ್ಯಾಂಪಸ್‌ಗೆ ಸಂಚರಿಸಲಿವೆ. ಅಲ್ಲದೆ ತುಮಕೂರು- ಕುಣಿಗಲ್ ಮಾರ್ಗದಲ್ಲಿ ಕ್ಯಾಂಪಸ್‌ನ ಸಂಪರ್ಕ ರಸ್ತೆ ಬಳಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ನಿಲುಗಡೆಗೆ ಕೋರಿದ್ದಾರೆ. ಅದನ್ನು ಸಹ ಶೀಘ್ರದಲ್ಲಿಯೇ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ತುಮಕೂರು ವಿವಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಕರಿಯಣ್ಣ, ಕಾಂಗ್ರೆಸ್ ಮುಖಂಡರಾದ ರೇವಣ್ಣಸಿದ್ದಯ್ಯ, ಗೀತಾರುದ್ರೇಶ್, ನಟರಾಜಶೆಟ್ಟಿ, ಆದಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!