ಕೃಷ್ಣ ಎನ್. ಲಮಾಣಿ
ಜಲಾಶಯದಿಂದ ಕಳೆದ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ನೀರು ನದಿಗೆ ಹರಿಸಲಾಗುತ್ತಿದೆ. ಹಂಪಿಯ ಕೋದಂಡರಾಮ ದೇವಾಲಯದ ಬಳಿಯ ಚಕ್ರತೀರ್ಥ ಪ್ರದೇಶದಲ್ಲಿ "ಹರಿಗೋಲು ಪಯಣ "ವನ್ನು 18 ಮೀನುಗಾರರು ನಡೆಸುತ್ತಿದ್ದಾರೆ. ಈ ಮೀನುಗಾರರು 10 ಹರಿಗೋಲುಗಳನ್ನಿಟ್ಟುಕೊಂಡು, ಹಂಪಿ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ ಮಾಡಿಸುತ್ತಿದ್ದಾರೆ. ಆದರೆ, ಈಗ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹರಿಗೋಲು ನಿಲ್ಲಿಸಲಾಗಿದೆ.
ಹರಿಗೋಲು ಪಯಣ ಹೇಗೆ?:ಹಂಪಿಯ ಕೋದಂಡರಾಮ ದೇಗುಲ ಬಳಿಯ ಚಕ್ರತೀರ್ಥ ಪ್ರದೇಶದಿಂದ ಋಷಿಮುಖ ಪರ್ವತದವರೆಗೆ ಹರಿಗೋಲು ಪಯಣ ನಡೆಯಲಿದೆ. ಸ್ಥಳೀಯ ಮೀನುಗಾರರು ದೇಶ, ವಿದೇಶಿ ಪ್ರವಾಸಿಗರನ್ನು ತೆಪ್ಪದಲ್ಲಿ ಕುಳ್ಳಿರಿಸಿಕೊಂಡು 45 ನಿಮಿಷದವರೆಗೆ ಹರಿಗೋಲು ಸವಾರಿ ಮಾಡಿಸುತ್ತಾರೆ. ಒಬ್ಬರಿಗೆ ₹200 ಶುಲ್ಕವಿದೆ. ನದಿಯಲ್ಲಿ ತೆರಳಿ ಸುತ್ತ ಕಲ್ಲುಗುಡ್ಡ, ಮಂಟಪ ಸುತ್ತಿ ಪ್ರವಾಸಿಗರು ವೀಕ್ಷಿಸಿ ಖುಷಿಪಡುತ್ತಾರೆ.
ಹಂಪಿಯಲ್ಲಿ ಕಳೆದ ವರ್ಷ ನಡೆದ ಜಿ-20 ಶೃಂಗಸಭೆ ವೇಳೆ ವಿದೇಶಿ ರಾಯಭಾರಿಗಳು, ಪ್ರತಿನಿಧಿಗಳನ್ನು ಹರಿಗೋಲು ಸವಾರಿ ಮಾಡಿಸಿ ಈ ಮೀನುಗಾರರು ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ. ಹರಿಗೋಲು ಸೇವೆ ಕುರಿತು ವಿದೇಶಿ ರಾಯಭಾರಿಗಳು ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ದೇಶ, ವಿದೇಶಿ ಪ್ರವಾಸಿಗರು ಹರಿಗೋಲು ಸವಾರಿಯತ್ತ ಆಕರ್ಷಿತರಾಗಿದ್ದರು. ಆದರೆ, ಈಗ ನದಿಗೆ ನೀರು ಬಿಟ್ಟಿರುವುದರಿಂದ ಬೇರೆ ದಾರಿ ಕಾಣದೇ ನೀರಿನ ಹರಿವು ಕಡಿಮೆ ಆಗುವುದನ್ನೇ ಈ ಮೀನುಗಾರರು ಎದುರು ನೋಡುತ್ತಿದ್ದಾರೆ.
ರಕ್ಷಣೆಗೆ ಧಾವಿಸುವ ಮೀನುಗಾರರು:
ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹರಿಗೋಲು ಹಾಕಲು ಆಗುತ್ತಿಲ್ಲ. ಹರಾಜಿನಲ್ಲಿ ಹರಿಗೋಲು ಸೇವೆ ಗುತ್ತಿಗೆ ಪಡೆದಿದ್ದು, ಹಾನಿಯಾಗುವ ಆತಂಕವಿದೆ. ಕಳೆದ ವಾರದಿಂದ ಒಂದು ರುಪಾಯಿ ದುಡಿಮೆ ಆಗಿಲ್ಲ. ನೀರು ಕಡಿಮೆ ಆಗುವುದನ್ನು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ಹಂಪಿಯ ಮೀನುಗಾರ ಎಲ್.ಪೀರು ನಾಯ್ಕ.