ಮಂಡ್ಯದಲ್ಲಿ ಬಿರುಗಾಳಿ ಮಳೆ: ಯುವ ಸಂಭ್ರಮ ಮುಂದೂಡಿಕೆ

KannadaprabhaNewsNetwork |  
Published : May 01, 2026, 01:30 AM IST
೩೦ಕೆಎಂಎನ್‌ಡಿ-೧ಬಿರುಗಾಳಿ ಮಳೆಗೆ ಮಂಡ್ಯ ವಿವಿ ಆವರಣದಲ್ಲಿ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಕುಸಿತಗೊಂಡಿರುವ ದೃಶ್ಯ. | Kannada Prabha

ಸಾರಾಂಶ

ಬುಧವಾರ ಸಂಜೆ ನಗರದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಕಿದ್ದ ಶಾಮಿಯಾನ ಕುಸಿದುಬಿದ್ದು ಗುರುವಾರ ನಡೆಯಬೇಕಿದ್ದ ಯುವ ಸಂಭ್ರಮ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬುಧವಾರ ಸಂಜೆ ನಗರದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಕಿದ್ದ ಶಾಮಿಯಾನ ಕುಸಿದುಬಿದ್ದು ಗುರುವಾರ ನಡೆಯಬೇಕಿದ್ದ ಯುವ ಸಂಭ್ರಮ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಮಂಡ್ಯ ವಿವಿ ಸ್ಥಾಪನೆಗಳು ಏಳು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನವ ವಸಂತ, ಪ್ರವೇಶದ್ವಾರ ಉದ್ಘಾಟನೆ, ಯುವ ಸಂಭ್ರಮ ಆಯೋಜಿಸಲಾಗಿತ್ತು. ೫೦ ಲಕ್ಷ ರು. ವೆಚ್ಚದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ರಾತ್ರಿ ಗುಡುಗು-ಮಿಂಚಿನ ಆರ್ಭಟದೊಂದಿಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ಆವರಣದಲ್ಲಿ ಹಾಕಿದ್ದ ಶಾಮಿಯಾನ ನೆಲಕಚ್ಚಿತ್ತು. ವಿವಿ ಆವರಣದ ಅಲ್ಲಲ್ಲಿ ನೀರು ನಿಂತು ಕಾಲಿಡಲಾಗದಷ್ಟು ಕೆಸರುಮಯವಾಗಿದೆ. ಕಾರ್ಯಕ್ರಮ ಮಾಡಲು ಸಾಧ್ಯವಾಗದ ರೀತಿಯಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದ್ದರಿಂದ ಗುರುವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಬೆಳಗ್ಗೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಪಿ.ರವಿಕುಮಾರ್, ಮಳೆಯಿಂದ ಶಾಮಿಯಾನ ಕುಸಿದುಬಿದ್ದಿದೆ. ನೀರು ಎಲ್ಲೆಡೆ ತುಂಬಿಕೊಂಡಿರುವುದರಿಂದ ಇವತ್ತಿನ ನಡೆಯಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ. ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ನಾಳೆ ಅಥವಾ ನಾಡಿದ್ದು ಕಾರ್ಯಕ್ರಮದ ದಿನಾಂಕ ತಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಭಾರೀ ಗಾಳಿ-ಮಳೆಗೆ ಹಲವೆಡೆ ಹಾಕಿದ್ದ ಫ್ಲೆಕ್ಸ್‌ಗಳು ಕಳಚಿಬಿದ್ದಿದ್ದರೆ, ಹಲವೆಡೆ ತೂರಿಕೊಂಡು ಹೋಗಿ ಮತ್ತೆಲ್ಲೋ ಬಿದ್ದಿವೆ. ಚಾಮುಂಡೇಶ್ವರಿ ನಗರದ ೬ನೇ ಕ್ರಾಸ್‌ನಲ್ಲಿ ಟ್ರಾನ್ಸ್‌ಫಾರ್ಮರ್ ಬಳಿ ವೈರ್‌ಗಳು ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಸುತ್ತಲಿನ ಜನರನ್ನು ಆತಂಕಕ್ಕೀಡಾಗುವಂತೆ ಮಾಡಿತ್ತು. ಅಲ್ಲದೇ, ರಾತ್ರಿಯಿಡೀ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಗುರುವಾರ ಬೆಳಗ್ಗೆ ೧೧ ಗಂಟೆ ಸಮಯಕ್ಕೆ ವಿದ್ಯುತ್ ಸರಬರಾಜು ಮಾಡಲಾಯಿತು. ವಿವೇಕಾನಂದ ನಗರ ಬಡಾವಣೆಯಲ್ಲಿ ಮರ ಉರುಳಿ ರಾತ್ರಿ ವಿದ್ಯುತ್ ಕಡಿತಗೊಂಡಿತ್ತು.

ಲಕ್ಷಾಂತರ ರುಪಾಯಿ ಬದನೆಕಾಯಿ ಫಸಲು ನಷ್ಟ:

ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಬದನೆಕಾಯಿ ಫಸಲು ನಷ್ಟವಾಗಿದೆ. ಎಚ್.ಎಲ್.ಶಿವಲಿಂಗಯ್ಯ ಅವರಿಗೆ ಸೇರಿದ ೨ ಎಕರೆ ಭೂಮಿಯಲ್ಲಿ ಒಂದೂಕಾಲು ಎಕರೆ ಬದನೆಕಾಯಿ, ತರಕಾರಿ ಗಿಡಗಳನ್ನು ಬೆಳೆಯಲಾಗಿತ್ತು.

ಆದರೆ, ಗಿಡಗಳು ಬೆಳೆದು ಫಸಲು ಬಂದು ಫಲ ಕೊಡುವ ಸಮಯದಲ್ಲಿ ಬಿದ್ದ ಭಾರೀ ಬಿರುಗಾಳಿ ಮಳೆಯಿಂದ ಗದ್ದೆಯಲ್ಲಾ ಮಳೆ ನೀರು ತುಂಬಿಕೊಂಡು ಗಿಡಗಳು ಬಿಟ್ಟಿದ್ದ ಹೂವುಗಳೆಲ್ಲ ಉದುರಿ ಲಕ್ಷಾಂತರ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಈಗ ಮಾರುಕಟ್ಟೆಯಲ್ಲಿ ಬದನೆಕಾಯಿಗೆ ಒಳ್ಳೆಯ ಬೆಲೆ ಇತ್ತು, ಬೇಸಿಗೆ ಮಳೆಯಿಂದ ರೈತ ಶಿವಲಿಂಗಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯ ತಿಳಿದ ಹೊಳಲು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ಗುಣಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ದೊರಕಿಸುವ ಭರವಸೆ ನೀಡಿದರು. ಜಿಲ್ಲೆಯಲ್ಲಿ ೯.೪ ಮಿ.ಮೀ. ಮಳೆ

ಜಿಲ್ಲೆಯಲ್ಲಿ ಬುಧವಾರ ರಾತ್ರಿ ೯.೪ ಮಿ.ಮೀ. ಮಳೆಯಾಗಿದೆ. ಮಂಡ್ಯ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ಮಳವಳ್ಳಿ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮಂಡ್ಯ-೨೫.೬ ಮಿ.ಮೀ., ಮದ್ದೂರು-೧೯.೬ ಮಿ.ಮೀ., ಪಾಂಡವಪುರ-೭.೩ ಮಿ.ಮೀ., ಶ್ರೀರಂಗಪಟ್ಟಣ- ೫.೫ ಮಿ.ಮೀ., ನಾಗಮಂಗಲ- ೫.೪ ಮಿ.ಮೀ., ಕೆ.ಆರ್.ಪೇಟೆ-೪.೮ ಮಿ.ಮೀ., ಹಾಗೂ ಮಳವಳ್ಳಿಯಲ್ಲಿ ೦.೭ ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಮಳೆ ಜಿಲ್ಲೆಯಲ್ಲಿ ಮೇ ೩ರವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

66/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ
ರಂಗಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮನೆಗಳು ಜಖಂ