ಕತ್ತಲ ಹಾದಿ ಪಯಣ: ಬೆಳಕಿಗಾಗಿ ಕಾಯುತ್ತಿವೆ ಮಕ್ಕಳ ಹೆಜ್ಜೆಗಳು!

KannadaprabhaNewsNetwork |  
Published : Sep 06, 2026, 03:15 AM IST
ಕೈಗೊಳ್ಳಬೇಕು. | Kannada Prabha

ಸಾರಾಂಶ

ಪ್ರತಿದಿನ ಸಂಜೆ ಟ್ಯೂಷನ್ ಮುಗಿಸಿಕೊಂಡು 25 ಕ್ಕೂ ಅಧಿಕ ಮಕ್ಕಳು ಮನೆಗೆ ಮರಳುವಾಗ ಹರೆಗೋಡುವಿನಿಂದ ಜಾಲಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೂಕ್ತ ದಾರಿದೀಪಗಳಿಲ್ಲದಿರುವುದು ಸಮಸ್ಯೆಯಾಗಿದೆ. ಸಂಜೆ ಕತ್ತಲಾಗುತ್ತಿದ್ದಂತೆ ಇದೇ ದಾರಿ ಮಕ್ಕಳಿಗೆ ಕಗ್ಗತ್ತಲಿನ ಪಯಣವಾಗುತ್ತಿದೆ.

ಶ್ರೀಕಾಂತ ಹೆಮ್ಮಾಡಿ

ಕುಂದಾಪುರ: ಬೆನ್ನ ಮೇಲೆ‌‌ ಶಾಲಾ ಬ್ಯಾಗ್... ಮನಸ್ಸಿನಲ್ಲಿ ಪಾಠದ ನೆನಪು... ಮನೆ ಸೇರುವ ತವಕ. ಆದರೆ ಟ್ಯೂಷನ್ ಮುಗಿಸಿ ಸಂಜೆ ಕತ್ತಲಲ್ಲಿ ಹೆಜ್ಜೆ ಹಾಕುವ ಮಕ್ಕಳಿಗೆ ಎದುರಾಗುವುದು ಮಾತ್ರ ಕಗ್ಗತ್ತಲಿನ ದಾರಿ!ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಕಟ್‌ಬೇಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲೂರು ರಸ್ತೆಯಿಂದ‌ ಹರೆಗೋಡು-ಜಾಲಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದಾರಿದೀಪದ ಕೊರತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಪ್ರತಿದಿನ ಸಂಜೆ ಟ್ಯೂಷನ್ ಮುಗಿಸಿಕೊಂಡು 25 ಕ್ಕೂ ಅಧಿಕ ಮಕ್ಕಳು ಮನೆಗೆ ಮರಳುವಾಗ ಹರೆಗೋಡುವಿನಿಂದ ಜಾಲಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೂಕ್ತ ದಾರಿದೀಪಗಳಿಲ್ಲದಿರುವುದು ಸಮಸ್ಯೆಯಾಗಿದೆ. ಸಂಜೆ ಕತ್ತಲಾಗುತ್ತಿದ್ದಂತೆ ಇದೇ ದಾರಿ ಮಕ್ಕಳಿಗೆ ಕಗ್ಗತ್ತಲಿನ ಪಯಣವಾಗುತ್ತಿದೆ.ಶಿಕ್ಷಣಕ್ಕಾಗಿ ಮಕ್ಕಳು ಪ್ರತಿದಿನ ಮನೆಯಿಂದ ಹೊರಬರುತ್ತಾರೆ. ಟ್ಯೂಷನ್ ಮುಗಿಸಿ ಮನೆಗೆ ಸುರಕ್ಷಿತವಾಗಿ ತಲುಪುವುದು ಅವರ ಪೋಷಕರ ಸಹಜ ನಿರೀಕ್ಷೆ. ಆದರೆ ಬೆಳಕಿಲ್ಲದ ರಸ್ತೆ, ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ಹುಲ್ಲು-ಗಿಡಗಂಟಿಗಳು ಮಕ್ಕಳ ಸಂಚಾರವನ್ನು ಅಪಾಯಕ್ಕೆ ತಳ್ಳುತ್ತಿವೆ. ರಸ್ತೆಯಲ್ಲಿ ವಾಹನಗಳ ಸಂಚಾರವೂ ಇರುವುದರಿಂದ ಕತ್ತಲಿನಲ್ಲಿ ಪಾದಚಾರಿಗಳಾಗಿ ಸಾಗುವ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಒಂದು ಸಣ್ಣ ಅವಘಡ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ, ಅದಕ್ಕೂ ಮುನ್ನ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಲ್ಲವೇ ಎಂಬ ಪ್ರಶ್ನೆ ಇದೀಗ ಸ್ಥಳೀಯರಿಂದ ಕೇಳಿಬರುತ್ತಿದೆ.ರಸ್ತೆ ಇದೆ... ಆದರೆ ಬೆಳಕಿಲ್ಲ:

ಹರೆಗೋಡುವಿನಿಂದ ಜಾಲಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಗ್ರಾಮದ ಹಲವು ಜನರ ದೈನಂದಿನ ಸಂಚಾರಕ್ಕೂ ಪ್ರಮುಖವಾಗಿದೆ. ಹೀಗಿದ್ದರೂ ರಾತ್ರಿ ವೇಳೆಯಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಗ್ರಾಮೀಣ ಮೂಲಸೌಕರ್ಯದ ವಾಸ್ತವ ಚಿತ್ರಣವನ್ನು ತೆರೆದಿಡುತ್ತಿದೆ.ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ರಸ್ತೆಯಲ್ಲಿ ದಾರಿದೀಪಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕನಿಷ್ಠ ಸೋಲಾರ್ ದೀಪಗಳನ್ನಾದರೂ ಅಳವಡಿಸಿ ಮಕ್ಕಳಿಗೆ ಬೆಳಕಿನ ದಾರಿ ತೋರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಜೊತೆಗೆ ರಸ್ತೆ ಬದಿಯಲ್ಲಿ ಬೆಳೆದಿರುವ ಹುಲ್ಲು, ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಿ, ಅಗತ್ಯವಿರುವ ಕಡೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಒಂದು ದೀಪ…ನೂರಾರು ನೆಮ್ಮದಿ!: ಹರೆಗೋಡು–ಜಾಲಾಡಿ ಸಂಪರ್ಕ ರಸ್ತೆಯ ಆರಂಭದ ಪಶು ಚಿಕಿತ್ಸಾಲಯದ ಬಳಿ ಈಗಲ್ಸ್ ಹರೆಗೋಡು ಕ್ರಿಕೆಟ್ ತಂಡದಿಂದ ಸೋಲಾರ್ ದೀಪ ಅಳವಡಿಸಲಾಗಿದೆ. ಸಂಜೆ ಮನೆಗೆ ಮರಳುವ ವಿದ್ಯಾರ್ಥಿಗಳಿಗೆ ಕತ್ತಲೆ ಅಡ್ಡಿಯಾಗದಂತೆ ರಸ್ತೆಯುದ್ದಕ್ಕೂ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದಾರಿದೀಪ ಅಳವಡಿಸಲು, ರಸ್ತೆ ಬದಿಯ ಹುಲ್ಲು ತೆರವುಗೊಳಿಸಲು ದೊಡ್ಡ ಅನುದಾನ ಬೇಕಿಲ್ಲ. ಪಂಚಾಯತ್ ಗೆ ಈಗಾಗಲೇ ಮನವಿ ನೀಡಿದರೂ ಪ್ರಯೋಜನವಿಲ್ಲ. ಇನ್ನಾದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ದಾರಿದೀಪ ಅಳವಡಿಕೆ, ಗಿಡಗಂಟಿ ತೆರವು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು.

ಪ್ರಸಾದ್ ಆಚಾರ್, ಅಧ್ಯಕ್ಷರು, ಮಹಾವಿಷ್ಣು ಯುವಕ ಮಂಡಲ ಹರೆಗೋಡು

ದಾರಿ ದೀಪ ಅಳವಡಿಸುವಂತೆ ಮನವಿ ಬಂದಿದ್ದು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇದಕ್ಕಾಗಿ ಅಗತ್ಯ ಅನುದಾನವನ್ನು ಕಾಯ್ದಿರಿಸಿಕೊಳ್ಳಬೇಕು. ಸ್ಥಳೀಯರು ಡೋನರ್‌ಗಳು ಇದ್ದಾರೆ ಎಂದು ತಿಳಿಸಿದ್ದಾರೆ. ಅವರಿಂದಲೂ ಸಹಕಾರ ಪಡೆದುಕೊಂಡು ದಾರಿದೀಪ ಅಳವಡಿಕೆ ಪೂರ್ಣಗೊಳಿಸಲಾಗುವುದು.

ರೇಖಾ, ಪಿಡಿಒ, ಕಟ್‌ಬೇಲ್ತೂರು ಗ್ರಾ.ಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಣ್ಣನ ಸಾವಿನ ನಂತ್ರ ತಂಗಿ ಸಾವು!
ಕೃಷ್ಣಾ ಮಡಿಲಲ್ಲಿ ಭಕ್ತಿ ಬೆಳಕು; ವೈಭವದ ಕೃಷ್ಣಾರತಿ