ಬಿಡಾಡಿ ದನಗಳ ಬೀದಿ ಕಾಳಗ; ಸಾರ್ವಜನಿಕರಿಗೆ ಪ್ರಾಣ ಸಂಕಟ

KannadaprabhaNewsNetwork |  
Published : May 18, 2024, 12:32 AM IST
ಗಜೇಂದ್ರಗಡದ ಸರಾಫ್ ಬಜಾರನಲ್ಲಿ ಬಿಡಾಡಿ ದನಗಳ ಗುದ್ದಾಟ-(ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಬೀದಿ ಬಿಡಾಡಿ ದನಗಳ ಗುಂಪಿನಲ್ಲಿ ಆರಂಭವಾದ ಗುದ್ದಾಟದಿಂದ ವಾಹನಗಳ ನಜ್ಜುಗುಜ್ಜಾಗುವುದು ಸಾಮಾನ್ಯವಾದರೆ, ಕೂದಲೆಳೆಯಲ್ಲಿ ಕೆಲವರು ಬದುಕುಳಿದ ಘಟನೆ ನಡೆಯುತ್ತಿವೆ

ಎಸ್.ಎಂ.ಸೈಯದ್ ಗಜೇಂದ್ರಗಡ

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿಯನ್ನು ಬೀದಿ ದನಗಳು ನಿರ್ಮಾಣ ಮಾಡಿವೆ. ಪರಿಣಾಮ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರ ಆಗ್ರಹಗಳಿಗೆ ಕಿಮ್ಮತ್ತಿಲ್ಲದಂತಾದ ಪರಿಣಾಮ ಪುರಸಭೆ ವಿರುದ್ಧ ಸಾರ್ವಜನಿಕರ ಕಿಡಿಕಾರುತ್ತಿದ್ದಾರೆ.

ಪಟ್ಟಣದ ಬಸವೇಶ್ವರ ವೃತ್ತ, ಭಜರಂಗ ವೃತ್ತ, ಸರಾಫ್ ಬಜಾರ, ದುರ್ಗಾ ವೃತ್ತ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಸೇರಿದಂತೆ ಸ್ಥಳೀಯ ಜೋಡು ರಸ್ತೆ ಹಾಗೂ ತರಕಾರಿ ಮಾರುಕಟ್ಟೆ ಸುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ ಹಾಗೂ ಸಂಜೆ ಬೀದಿ ದನಗಳ ಗುಂಪಿನಲ್ಲಿ ನಡೆಯುವ ಕಾಳಗದಿಂದ ಪಾರಾಗುವುದು ಸಾರ್ವಜನಿಕರಿಗೆ ಒಂದು ಸಾಹಸವಾಗಿದೆ. ಬೀದಿ ಬಿಡಾಡಿ ದನಗಳ ಗುಂಪಿನಲ್ಲಿ ಆರಂಭವಾದ ಗುದ್ದಾಟದಿಂದ ವಾಹನಗಳ ನಜ್ಜುಗುಜ್ಜಾಗುವುದು ಸಾಮಾನ್ಯವಾದರೆ, ಕೂದಲೆಳೆಯಲ್ಲಿ ಕೆಲವರು ಬದುಕುಳಿದ ಘಟನೆ ನಡೆಯುತ್ತಿವೆ.

ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಬಿಡಾಡಿ ದನಗಳ ಮಾಲೀಕರಿಗೆ ತಮ್ಮ ದನ ಹಿಡಿದು ಕಟ್ಟಿಹಾಕಿಕೊಳ್ಳಬೇಕು. ಇಲ್ಲದಿದ್ದರೆ ದಂಡದ ಜತೆಗೆ ಬಿಡಾಡಿ ದನಗಳನ್ನು ಗೋಶಾಲೆಗೆ ಸ್ಥಳಾಂತರಿಸುವ ಧ್ವನಿವರ್ಧಕದ ಮೂಲಕದ ಎಚ್ಚರಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಹೀಗಾಗಿ ಕೆಲ ಮಾಲೀಕರು ದನಗಳನ್ನು ಹಿಡಿದು ಆ ನಂತರದ ದಿನಗಳಲ್ಲಿ ಮತ್ತೆ ದನಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಪರಿಣಾಮ ಬಿಡಾಡಿ ದನಗಳ ಹಾವಳಿಯು ಪಟ್ಟಣದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಹೀಗಾಗಿ ಪುರಸಭೆಯು ಪಟ್ಟಣದಲ್ಲಿರುವ ಬಿಡಾಡಿ ದನಗಳ ಮಾಲೀಕರಿಗೆ ಮುನ್ನಚ್ಚರಿಕೆ ಕ್ರಮವಾಗಿ ಒಂದು ತಿಂಗಳ ಕಾಲವಕಾಶ ನೀಡಿ ನೋಟಿಸ್ ಜಾರಿ ಮಾಡಬೇಕು. ಅಷ್ಟರೊಳಗೆ ಬಿಡಾಡಿ ದನಗಳನ್ನು ಮಾಲೀಕರು ಹಿಡಿಯದಿದ್ದರೆ ರಸ್ತೆಯಲ್ಲಿ ಬಿಟ್ಟಿರುವ ಬಿಡಾಡಿ ದನಗಳನ್ನು ಗೋ-ಶಾಲೆಗೆ ಬಿಡಲಾಗುವುದು ಎನ್ನುವ ಖಡಕ್ ನಿರ್ಧಾರದ ಜತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾದರೆ ಮಾತ್ರ ಪಟ್ಟಣದಲ್ಲಿ ಬಿಡಾಡಿ ದನ ಹಾವಳಿಗೆ ಕಡಿವಾಣ ಹಾಕಲು ಸಾಧ್ಯ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಪಟ್ಟಣದಲ್ಲಿ ಬಿಡಾಡಿ ದನಗಳು ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಗುಂಪಾಗಿ ನಿಲ್ಲುವದು ಹಾಗೂ ಗುದ್ದಾಡುವದರಿಂದ ಸಾರ್ವಜನಿಕರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಹೀಗಾಗಿ ಅಹಿತಕರ ಘಟನೆ ನಡೆಯುವ ಮುನ್ನ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ