ಡಂಬಳ: ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬೀದಿನಾಯಿಯೊಂದು ಊರಿನಲ್ಲಿ ಯಾರಾದರೂ ಸಾವಿಗೀಡಾದರೆ ಶವಯಾತ್ರೆ ವೇಳೆ ಹಾಗೂ ಸ್ಮಶಾನದಲ್ಲಿ ಪ್ರತ್ಯಕ್ಷವಾಗುವ ಮೂಲಕ ಗಮನ ಸೆಳೆದಿದೆ.
ಈ ನಾಯಿಯು ಅಂತ್ಯಸಂಸ್ಕಾರ ಮೆರವಣಿಗೆಯೊಂದಿಗೆ ಸ್ಮಶಾನದವರೆಗೂ ಸಾಗುತ್ತದೆ. ಅಲ್ಲದೆ ಅಂತ್ಯಸಂಸ್ಕಾರ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲೇ ಇದ್ದು, ನಂತರ ತನ್ನ ದಾರಿಯನ್ನು ಹಿಡಿಯುತ್ತದೆ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎನ್ನುತ್ತಾರೆ ಗ್ರಾಮದ ಹಿರಿಯರಾದ ಈರಣ್ಣ ಸಲಗಾರ, ಮಂಜುನಾಥ ಸಂಜಿವಣ್ಣವರ.
ರೋಣ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನ ಮೇಲೆ ಗುರುವಾರ ಪೊಲೀಸರು ಮತ್ತು ಆಹಾರ ವಿಭಾಗ ಅಧಿಕಾರಿಗಳು ದಾಳಿ ಮಾಡಿ ಪಡಿತರ ಅಕ್ಕಿ ತುಂಬಿರುವ 69 ಚೀಲ(34 ಕ್ವಿಂಟಲ್ 40 ಕೆಜಿ)ಗಳನ್ನು ವಾಹನ ಸಮೇತ ವಶಪಡಿಸಿಕೊಂಡು ಪ್ರಕರಣದ ದಾಖಲಿಸಲಾಗಿದೆ.ಆಹಾರ ವಿಭಾಗ ನಿರೀಕ್ಷಕರಾದ ಸುವರ್ಣ ಜಮ್ಮನಕಟ್ಟಿ ಹಾಗೂ ಪೊಲೀಸರು ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ನೀರಾವರಿ ಪರಿವೀಕ್ಷಣಾ ಮಂದಿರ ಹತ್ತಿರ ಮಲ್ಲಾಪುರದಿಂದ ರೋಣ ಕಡಗೆ ಬರುತ್ತಿದ್ದ ಟಾಟಾ ಕಂಪನಿಯ ಇಂಟ್ತಾ ವಾಹನ ತಡೆದು ಜಪ್ತಿ ಮಾಡಲಾಗಿದ್ದು, ಈ ವೇಳೆ ಪಡಿತರ ಅಕ್ಕಿ ತುಂಬಿರುವ ಒಟ್ಟು 69 ಚೀಲ ಪತ್ತೆಯಾಗಿದ್ದು, ಈ ಕುರಿತು ಬೇಟಗೇರಿಯ ಗಣೇಶ ನಗರದ ವಾಹನ ಚಾಲಕ ರಮಜಾನಸಾಬ ಸೂರಣಗಿ ಎಂಬವನನ್ನು ವಿಚಾರಿಸಿದಾಗ, ಅಕ್ಕಿ ಚೀಲಗಳು ಪಡಿತರ ಅಕ್ಕಿಯದ್ದಾಗಿದ್ದು, ಮಲ್ಲಾಪುರದಿಂದ ರೋಣಕ್ಕೆ ತೆರಳಲಾಗುತ್ತಿರುವ ಕುರಿತು ಒಪ್ಪಿಕೊಂಡಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.