ಕನ್ನಡಪ್ರಭ ವಾರ್ತೆ ಬೆಂಗಳೂರು
ಮುನೇಶ್ವರ ಲೇಔಟ್, ಫ್ರೀಡಂ ಫೈಟರ್ಸ್ ಕಾಲೋನಿ ಸುತ್ತಲಿನ ಪ್ರದೇಶಗಳ ರಾತ್ರಿ 8.30ರ ವೇಳೆಗೆ ಬೀದಿ ನಾಯಿಯೊಂದು ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ವರ್ತನೆ ಆರಂಭಿಸಿ ದಾರಿಹೋಕರ ಮೇಲೆ ದಾಳಿ ಆರಂಭಿಸಿದೆ. ಈ ವೇಳೆ ಓರ್ವ ಬಾಲಕಿಯ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ. ನಾಯಿಯನ್ನು ಓಡಿಸಿದ ಸ್ಥಳೀಯರು ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ಕೈಗಳಿಗೆ ಗಾಯವಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ನಂತರ ಅಲ್ಲಿದ ಓಡಿದ ನಾಯಿ ದಾರಿಯಲ್ಲಿ ಮತ್ತೆ ಮೂವರ ಮೇಲೆ ದಾಳಿ ನಡೆಸಿದೆ. ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ನಾಯಿ ದಾಳಿಯಿಂದ ರಕ್ಷಣೆಗೆ ನಾಗರಿಕರು ಓಡಿ ಮನೆ, ಅಂಗಡಿಗಳ ಒಳಗೆ ಸೇರಿಕೊಳ್ಳುವಂತಾಗಿತ್ತು. ಅನೇಕರು ತಮ್ಮ ಮನೆಯ ಬಾಗಿಲು ಹಾಕಿಕೊಂಡು ನಾಯಿ ಯಾವ ಕಡೆ ಹೋಗಿದೆ ಎಂದು ವಿಚಾರಿಸುತ್ತಿದ್ದರು ಎಂದು ಸ್ಥಳೀಯರು ಜಿಬಿಎ ಸಿಬ್ಬಂದಿ ಎದುರು ಅಳಲು ತೋಡಿಕೊಂಡಿದ್ದಾರೆ.
ಹಲವು ಜನರ ಮೇಲೆ ದಾಳಿ ನಡೆಸುವುದನ್ನು ಗಮನಿಸಿದರೆ ಆ ಬೀದಿ ನಾಯಿ ಅನಾರೋಗ್ಯಪೀಡಿತವಾಗಿತ್ತು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.