ಯಲ್ಲಾಪುರದಲ್ಲಿ ಹೆಚ್ಚಿದ ಬೀದಿನಾಯಿಗಳ ಉಪಟಳ

KannadaprabhaNewsNetwork |  
Published : Sep 29, 2026, 02:30 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಪಟ್ಟಣದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಧೈರ್ಯದಿಂದ ಓಡಾಡುವ ಸ್ಥಿತಿ ಇಲ್ಲವಾಗಿದೆ. ಪಟ್ಟಣದ ಆಡಳಿತ ವ್ಯವಸ್ಥೆ ತೀರಾ ಶಿಥಿಲಗೊಂಡಿದೆ. ಯಾವ ಗಲ್ಲಿಯಲ್ಲಿ ಹೋದರೂ ಹತ್ತಿಪ್ಪತ್ತು ನಾಯಿಗಳ ತಂಡವನ್ನು ಕಾಣಬಹುದು.

ಶಂಕರ ಭಟ್ಟ ತಾರೀಮಕ್ಕಿಯಲ್ಲಾಪುರ: ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಎರಡು ವಿದ್ಯಾರ್ಥಿಗಳಿಗೆ ಹಾಗೂ ಒಂದು ಮಗುವಿಗೆ ಬೀದಿನಾಯಿ ಕಚ್ಚಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಪಟ್ಟಣ ಪಂಚಾಯಿತಿಯವರು ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಧೈರ್ಯದಿಂದ ಓಡಾಡುವ ಸ್ಥಿತಿ ಇಲ್ಲವಾಗಿದೆ. ಪಟ್ಟಣದ ಆಡಳಿತ ವ್ಯವಸ್ಥೆ ತೀರಾ ಶಿಥಿಲಗೊಂಡಿದೆ. ಯಾವ ಗಲ್ಲಿಯಲ್ಲಿ ಹೋದರೂ ಹತ್ತಿಪ್ಪತ್ತು ನಾಯಿಗಳ ತಂಡವನ್ನು ಕಾಣಬಹುದು. ಅವುಗಳ ನಿಯಂತ್ರಣ ಪಟ್ಟಣ ಪಂಚಾಯಿತಿಯಿಂದ ಆಗುತ್ತಿಲ್ಲ. ಬೀದಿನಾಯಿಗಳಿಗೆ ಅಂಜಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ರಸ್ತೆಯಲ್ಲಿ ಓಡಾಡಲು ಹಿಂಜರಿಯುವಂತಾಗಿದೆ.

ಹಂದಿಗಳ ಹಾವಳಿ: ಎಲ್ಲಿ ನೋಡಿದರೂ ರಸ್ತೆಯ ಅಕ್ಕಪಕ್ಕದ ಗಟಾರದಲ್ಲಿ ಹಂದಿಗಳನ್ನು ಕಾಣಬಹುದು. ಪಟ್ಟಣದ ನಾಗರಿಕರು ಸುಮಾರು ಶೇ. ೨೦ರಷ್ಟು ಜನ ಮನೆಯ ಕಸವನ್ನು ಗಟಾರಕ್ಕೆ ಚೆಲ್ಲುತ್ತಾರೆ. ಇದರಿಂದ ಹಂದಿಗಳ ಸಂಖ್ಯೆ ಬೆಳೆಯಲು ಕಾರಣವಾಗಿದೆ. ಪಪಂ ಕಸದ ವಾಹನಕ್ಕೆ ಕಸ ನೀಡದವರಿಗೆ ಕಾನೂನು ಕ್ರಮ ಕೈಗೊಳ್ಳುವ ಶಕ್ತಿಯೂ ಇಲ್ಲವಾಗಿದೆ.

ರಸ್ತೆ ಮೇಲೆ ಮೀನು ಮಾರಾಟ: ಪಟ್ಟಣದ ಅನೇಕ ಕಡೆ ರಸ್ತೆಯ ಮೇಲೆ ಮೀನು ಮಾರಲು ಪ್ರಬಲರ ಬೆಂಬಲ ಇದೆ ಎಂಬ ಆರೋಪ ಕೇಳಿಬಂದಿದೆ. ಪಪಂದವರು ಆಗಾಗ ಬಂದು ಅವರನ್ನು ಎಬ್ಬಿಸಿ ಹೋಗುತ್ತಾರೆ. ಮರುದಿನ ಪುನಃ ವ್ಯಾಪಾರ ಪ್ರಾರಂಭ. ''''ನಾನು ಇವತ್ತು ಎಬ್ಬಿಸುತ್ತೇನೆ. ನಾಳೆ ಬಂದು ಪುನಃ ಮೀನು ಮಾರಿ. ನಮ್ಮ ಬೆಂಬಲ ಇದೆ'''' ಎನ್ನುವಂತಾಗಿದೆ. ಅಂದರೆ ಪಟ್ಟಣ ಪಂಚಾಯಿತಿಯ ಆಡಳಿತ ವ್ಯವಸ್ಥೆ ಅತ್ಯಂತ ಹದಗೆಟ್ಟಿದೆ ಎನ್ನುವುದು ಈ ಎಲ್ಲ ಘಟನೆಗಳಿಂದ ತಿಳಿದುಕೊಳ್ಳಬಹುದಾಗಿದೆ.

ಹಂದಿಗಳು ರಸ್ತೆಯಲ್ಲಿ ಸದಾ ಓಡಾಡುತ್ತಿರುವುದರಿಂದ ಅನೇಕರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ ಘಟನೆ ಸಾಕಷ್ಟಿದೆ. ಪಟ್ಟಣದಲ್ಲಿ ಮೀನು ಮಾರುಕಟ್ಟೆ ದೊಡ್ಡದಿದ್ದರೂ ಹೊರಗಿನಿಂದ ಬರುವ ಮೀನು ಮಾರಾಟಗಾರರು ಸ್ಥಳೀಯರ ಬೆಂಬಲದಿಂದ ತಟಗಾರ ಕ್ರಾಸ್‌ ಬಳಿ, ಜೋಡುಕೆರೆ ಬಳಿ ಮೀನು ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನು ಕಾಣಬಹುದು. ಇವರಿಗೆ ಕೆಲ ಸ್ಥಳೀಯ ಪುಡಾರಿಗಳು ಬೆಂಬಲಿಸುತ್ತಿರುವುದು ಅಥವಾ ವ್ಯವಹಾರಕ್ಕಿಳಿದಿದ್ದಾರೆ ಎನ್ನುವ ಆಕ್ಷೇಪಗಳು ವ್ಯಕ್ತವಾಗಿವೆ. ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣ ತಕ್ಷಣದಿಂದ ಮಾಡಬೇಕು. ಹಾಗೆಯೇ ಬಿಡಾಡಿ ದನಗಳನ್ನೂ ನಿಯಂತ್ರಿಸಬೇಕು. ಒಂದು ವಾರದಲ್ಲಿ ಇವುಗಳ ನಿಯಂತ್ರಣ ಮಾಡದಿದ್ದರೆ ಬಿಜೆಪಿಯಿಂದ ಪಪಂ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ ಪಾಟಣಕರ್ ತಿಳಿಸಿದರು.ಬೀದಿನಾಯಿಗಳ ನಿಯಂತ್ರಣಕ್ಕೆ ಈಗಾಗಲೇ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ಎರಡ್ಮೂರು ಬಾರಿ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಪುನಃ ಅವರನ್ನು ಕರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದು ತಹಸೀಲ್ದಾರ್ ಮತ್ತು ಪಪಂ ಆಡಳಿತಾಧಿಕಾರಿ ಎಂ.ಆರ್. ಕುಲಕರ್ಣಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ