ಶ್ವಾನ ಉತ್ಸವಕ್ಕೆ ಪರಭಾಷೆ ಹೆಸರು: ಜನಾಕ್ರೋಶ

KannadaprabhaNewsNetwork |  
Published : Oct 18, 2024, 12:04 AM IST
ಬಿಬಿಎಂಪಿ ಕಳುಹಿಸಿರುವ ಆಹ್ವಾನ ಪ್ರಕಟಣೆಯಲ್ಲಿ ಕುಕುರ್‌ ತಿಹಾರ್ ಹೆಸರು ಬಳಕೆ. | Kannada Prabha

ಸಾರಾಂಶ

ಬಿಬಿಎಂಪಿಯು ‘ಕುಕುರ್‌ ತಿಹಾರ್‌’ ಎಂಬ ಪರಭಾಷೆ ಹೆಸರಿಟ್ಟುಕೊಂಡು ‘ಬೀದಿನಾಯಿಗಳಿಗೆ ಆಹಾರ ನೀಡುವ ಶ್ವಾನ ಉತ್ಸವ’ ನಡೆಸಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯು ‘ಕುಕುರ್‌ ತಿಹಾರ್‌’ ಎಂಬ ಪರಭಾಷೆ ಹೆಸರಿಟ್ಟುಕೊಂಡು ‘ಬೀದಿನಾಯಿಗಳಿಗೆ ಆಹಾರ ನೀಡುವ ಶ್ವಾನ ಉತ್ಸವ’ ನಡೆಸಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಬಿಬಿಎಂಪಿಯು ವಿವಿಧ ಎನ್‌ಜಿಓ ಸಹಯೋಗದಲ್ಲಿ ಗುರುವಾರ ರಾಜಧಾನಿಯ ಬೀದಿ ಬಾಯಿಗಳಿಗೆ ಆಹಾರ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಆದರೆ, ಈ ಕಾರ್ಯಕ್ರಮಕ್ಕೆ ಉತ್ತರ ಭಾರತದಲ್ಲಿ ನಾಯಿಗಳಿಗೆ ಪೂಜೆ ಸಲ್ಲಿಸುವ ಹಬ್ಬದ ಹೆಸರು ‘ಕುಕುರ್‌ ತಿಹಾರ್’ ಎಂದು ಇಡಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿರುವುದಕ್ಕೆ ಕನ್ನಡಿಗರ ವಿರೋಧವಿಲ್ಲ. ಆದರೆ, ಬಿಬಿಎಂಪಿಯ ಸಹಯೋಗದಲ್ಲಿ ನಡೆಸುವ ಕಾರ್ಯಕ್ರಮಕ್ಕೆ ಪರಭಾಷೆ ಬಳಕೆ ಮಾಡಿಕೊಂಡಿರುವುದು ಸರಿಯಲ್ಲ. ಅದರಲ್ಲೂ ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿರುವ ಈ ಸಂದರ್ಭದಲ್ಲಿ ಬಿಬಿಎಂಪಿಯ ಅಧಿಕಾರಿಗಳು ಪರಭಾಷೆಯಡಿ ಕಾರ್ಯಕ್ರಮ ನಡೆಸಿರುವುದು ಕನ್ನಡ ಮಾಡಿರುವ ದ್ರೋಹ ಎಂದು ಖಂಡಿಸಿದ್ದಾರೆ.

ಕನ್ನಡ ಭಾಷೆಯು ಅತ್ಯಂತ ಶ್ರೀಮಂತವಾಗಿದೆ. ಕನ್ನಡದ ಹೆಸರಿನಲ್ಲಿ ಕಾರ್ಯಕ್ರಮ ನಡೆಸಬಹುದಾಗಿತ್ತು. ಆಗ ಕಾರ್ಯಕ್ರಮವೂ ಇನ್ನಷ್ಟು ಜನರಿಗೆ ತಲುವಂತಾಗುತ್ತಿತ್ತು. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಭಾಷೆಯ ಕೆಲವು ಅಧಿಕಾರಿಗಳು ಕನ್ನಡಿಗರ ಮೇಲೆ ಹಿಂದಿ ಸೇರಿದಂತೆ ಇನ್ನಿತರೆ ಉತ್ತರ ಭಾರತೀಯ ಭಾಷೆಯನ್ನು ವ್ಯವಸ್ಥಿತವಾಗಿ ಹೇರುವ ಕುತಂತ್ರ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಜತೆಗೆ, ಕುಕುರ್‌ ತಿಹಾರ್‌ ಕಾರ್ಯಕ್ರಮ ನಡೆಸಿದ ಬಿಬಿಎಂಪಿಯ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಇತರೆ ಪರಭಾಷಾ ಅಧಿಕಾರಿಗಳಿಗೆ ಪಾಠವಾಗಬೇಕು ಎಂದು ಆಗ್ರಹಿಸಿದ್ದಾರೆ.ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ

ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮ, ಯೋಜನೆ ರೂಪಿಸುವ ವೇಳೆ ಕನ್ನಡ ನಾಡಿನ ಮೂಲ ಸಂಸ್ಕೃತಿ, ಭಾಷೆಯನ್ನು ಅಳವಡಿಕೆ ಮಾಡಿಕೊಳ್ಳಬೇಕು. ಬೇರೆ ಭಾಷೆ ಪದಗಳನ್ನು ಬಳಕೆ ಮಾಡಿಕೊಂಡು ಹೆಸರು ಇಡುವುದು ಸರಿಯಲ್ಲ. ಶ್ವಾನ ಮಹೋತ್ಸವಕ್ಕೆ ಕುಕುರ್ ತಿಹಾರ್‌ ಎಂಬ ಪರಭಾಷೆ ಹೆಸರು ಇಟ್ಟು ಕಾರ್ಯಕ್ರಮ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಲಿದೆ. ಕುಕುರ್‌ ತಿಹಾರ್‌ ಹೆಸರು ಇಟ್ಟು ಕಾರ್ಯಕ್ರಮ ನಡೆಸಿದ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

ಟಿ.ಎ.ನಾರಾಯಣಗೌಡ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಉತ್ತರ ಭಾರತೀಯರ ಹೆಸರಲ್ಲಿ ಉತ್ಸವ ಅಕ್ಷಮ್ಯ

ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸವನ್ನು ಉತ್ತರ ಭಾರತೀಯರು ಮಾತ್ರವಲ್ಲದೇ ಕನ್ನಡಿಗರು ಮಾಡುತ್ತಾರೆ. ಆದರೆ, ಉತ್ತರ ಭಾರತೀಯ ಭಾಷೆಯಲ್ಲಿ ಶ್ವಾನ ಮಹೋತ್ಸವ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಬಿಬಿಎಂಪಿಯ ಕಚೇರಿ ಮೇಲೆ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಫಲಕ ಹಾಕಲಾಗಿದೆ. ಆದರೆ, ಅಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಪರ ಭಾಷೆಯ ಪದವನ್ನು ಬಳಕೆ ಮಾಡಿರುವುದು ಘೋರ ಅಪರಾಧವಾಗಿದೆ. ಬಿಬಿಎಂಪಿಯ ಅಧಿಕಾರಿಗಳು ಬಹಿರಂಗವಾಗಿ ಕನ್ನಡಿಗರ ಕ್ಷಮೆ ಕೇಳಬೇಕು. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಹೊಣೆ ಹೊತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕನ್ನಡ ರಾಜ್ಯೋತ್ಸವದ ವೇಳೆ ನಗರದ ಪ್ರತಿಯೊಬ್ಬ ವ್ಯಾಪಾರಿಗಳು ಕನ್ನಡ ಬಾವುಟ ಪ್ರದರ್ಶಿಸಬೇಕು. ಕನ್ನಡ ಭಾಷೆಯಲ್ಲಿ ಮಾತನಾಡಬೇಕೆಂಬ ಸಂದೇಶ ನೀಡಿದ್ದಾರೆ. ಆದರೆ, ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಬಿಬಿಎಂಪಿಯಲ್ಲಿ ಈ ರೀತಿ ಮಾಡಿರುವುದು ಸರಿಯಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

-ಪ್ರವೀಣ್‌ ಶೆಟ್ಟಿ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

ಪರಭಾಷಾ ವ್ಯಾಮೋಹ ಮೊದಲು ಬಿಡಬೇಕು

ಶ್ವಾನಗಳ ಮೇಲಿನ ಪ್ರೇಮವು ಅತ್ಯಂತ ವೈಯಕ್ತಿಕ ವಿಚಾರವಾಗಿದೆ. ಆದರೆ, ರಾಜ್ಯೋತ್ಸವದ ಹೊಸ್ತಿಲಿನಲ್ಲಿ ಇರುವ ಈ ಸಂದರ್ಭದಲ್ಲಿ ಬಿಬಿಎಂಪಿಯು ಪರಭಾಷೆ ಬಳಕೆ ಮಾಡಿಕೊಂಡು ಕಾರ್ಯಕ್ರಮ ನಡೆಸುವುದು ಎಷ್ಟು ಸರಿ? ಕುಕುರ್‌ ತಿಹಾರ್‌ ಪದ ಯಾರಿಗೆ ಅರ್ಥವಾಗುತ್ತೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ತೀವ್ರವಾಗಿ ಖಂಡಿಸಲಿದೆ. ಸರ್ಕಾರಿ ಅಧಿಕಾರಿಗಳು ಮೊದಲು ಪರ ಭಾಷೆಯ ಮೇಲಿನ ವ್ಯಾಮೋಹವನ್ನು ಬಿಡಬೇಕು. ಬಿಬಿಎಂಪಿ ಅಧಿಕಾರಿಗಳು ಕುಕುರ್‌ ತಿಹಾರ್‌ ಹೆಸರು ಇಟ್ಟುಕೊಂಡು ಕಾರ್ಯಕ್ರಮ ನಡೆಸಿರುವ ಬಗ್ಗೆ ಅಧ್ಯಯನ ನಡೆಸಿ ಕ್ರಮಕ್ಕೆ ಒತ್ತಾಯಿಸುತ್ತೇನೆ.

-ಡಾ। ಮಹೇಶ್‌ ಜೋಶಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು.

ಕನ್ನಡ ಭಾಷೆಯೇ ಅತ್ಯಂತ ಶ್ರೀಮಂತ

ಪರಭಾಷೆಯ ಹೆಸರು ಇಟ್ಟುಕೊಂಡು ಕಾರ್ಯಕ್ರಮ ನಡೆಸುವ ರೋಗ ಬಿಬಿಎಂಪಿಯ ಅಧಿಕಾರಿಗಳಿಗೆ ಏಕೆ ಬಂದಿದೆ. ಈಗಲೇ ಬೆಂಗಳೂರಿನ ಕನ್ನಡಿಗರು ಸಂಕಷ್ಟದಲ್ಲಿ ಇದ್ದಾರೆ. ಪರ ಭಾಷಿಗರು ಕನ್ನಡಿಗರ ಮೇಲೆ ದಾಳಿ ಮಾಡುತ್ತಿದ್ದಾರೆ. ಕನ್ನಡ ಭಾಷೆಯೇ ಅತ್ಯಂತ ಶ್ರೀಮಂತವಾಗಿದೆ. ಯಾರದೋ ಮೇಲಿನ ಪ್ರೀತಿ, ಅಭಿಮಾನಕ್ಕೆ ಈ ರೀತಿ ಮಾಡುವುದು ಸರಿಯಲ್ಲ.

-ವಾಟಾಳ್‌ ನಾಗರಾಜ್‌, ಕನ್ನಡ ಪರ ಹೋರಾಟಗಾರ.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ