ಬೀದಿ ದೀಪ ಬೆಳಗುತ್ತಿಲ್ಲ, ಮಧ್ಯರಾತ್ರಿ ನೀರು ಪೂರೈಕೆ!

KannadaprabhaNewsNetwork |  
Published : Nov 06, 2025, 02:15 AM IST
ಫೋನ್‌ಇನ್‌ ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ ಸಾರ್ವಜನಿಕರ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಕೆಲ ವಾರ್ಡ್‌ಗಳಲ್ಲಿ ಮಧ್ಯರಾತ್ರಿ ನೀರು ಪೂರೈಸಲಾಗುತ್ತಿದ್ದು ತೀವ್ರ ಸಮಸ್ಯೆಯಾಗುತ್ತದೆ. ಬೀದಿದೀಪಗಳು ಬೆಳಗುತ್ತಿಲ್ಲ. ಇದರಿಂದ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಹೋಗಲು ಭಯವಾಗುತ್ತಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದರು.

ಹುಬ್ಬಳ್ಳಿ:

ಬೀದಿದೀಪ, ಕುಡಿಯುವ ನೀರಿನ ಬಗ್ಗೆಯೇ ಅತಿ ಹೆಚ್ಚು ದೂರುಗಳು ದಾಖಲಾಗುತ್ತಿವೆ. ಸಾರ್ವಜನಿಕರು ಕಂಟ್ರೋಲ್ ರೂಂಗೆ ದೂರು ನೀಡಿದರೂ ಅಧಿಕಾರಿಗಳು ಏಕೆ ಸ್ಪಂದಿಸುತ್ತಿಲ್ಲವೆಂದು ಮೇಯರ್‌ ಜ್ಯೋತಿ ಪಾಟೀಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬುಧವಾರ ನಡೆದ ಮೇಯರ್ ಜತೆ ಮಾತುಕತೆ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರು ಆಹವಾಲಿಸಿ ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ವಾರ್ಡ್‌ಗಳಲ್ಲಿ ಮಧ್ಯರಾತ್ರಿ ನೀರು ಪೂರೈಸಲಾಗುತ್ತಿದ್ದು ತೀವ್ರ ಸಮಸ್ಯೆಯಾಗುತ್ತದೆ. ಬೀದಿದೀಪಗಳು ಬೆಳಗುತ್ತಿಲ್ಲ. ಇದರಿಂದ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಹೋಗಲು ಭಯವಾಗುತ್ತಿದೆ ಎಂದು ದೂರುಗಳಿಗೆ ಸ್ಪಂದಿಸಿದ ಮೇಯರ್‌, ಬೀದಿದೀಪ ನಿರ್ವಹಣೆ ಮಾಡದವರಿಗೆ ದಂಡ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಒಂದು ತಿಂಗಳಿಂದ ನಡೆದ ಆರ್ಥಿಕ, ಸಾಮಾಜಿಕ ಸಮೀಕ್ಷೆ ಅಧಿಕಾರಿಗಳು ಭಾಗವಹಿಸಿದ್ದರಿಂದ ದೂರುಗಳಿಗೆ ಸ್ಪಂದಿಸಲು ಆಗಿಲ್ಲ. ಇದೀಗ ಮುಗಿದಿದ್ದು ದೂರುಗಳನ್ನು ನಿವಾರಿಸುತ್ತಾರೆಂದು ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

33 ದೂರು ಸ್ವೀಕೃತ:

ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 33 ದೂರುಗಳು ಸ್ವೀಕೃತವಾಗಿದ್ದು, ಎ ವಿಭಾಗದಲ್ಲಿ 19, ಬಿ ವಿಭಾಗದಲ್ಲಿ 3 ಹಾಗೂ ಸಿ ವಿಭಾಗದಲ್ಲಿ 11 ದೂರುಗಳು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ ಎಂದು ಜ್ಯೋತಿ ಪಾಟೀಲ ಮಾಹಿತಿ ನೀಡಿದರು.

ಪರ್ಯಾಯ ಮಾರ್ಗದತ್ತ ಚಿಂತನೆ

₹93 ಕೋಟಿ ವೆಚ್ಚದ ಎಲ್‌ಇಡಿ ದೀಪದ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಾದೇಶ ಹಂತದಲ್ಲಿಯೇ ನನೆಗುದಿಗೆ ಬಿದ್ದಿದೆ. ಗುತ್ತಿಗೆ ಪಡೆದ ಕಂಪನಿ ಬ್ಯಾಂಕ್ ಗ್ಯಾರಂಟಿ ನೀಡಲು ವಿಳಂಬ ಮತ್ತು ನಿರ್ಲಕ್ಷ್ಯ ವಹಿಸಿದ್ದರಿಂದ ಟೆಂಡರ್ ರದ್ದುಪಡಿಸಿ ಪರ್ಯಾಯ ಮಾರ್ಗದತ್ತ ಪಾಲಿಕೆ ಚಿಂತನೆ ನಡೆಸಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯನ್ನು ತುಮಕೂರಿನ ಮಂಜುನಾಥ ಎಲೆಕ್ಟ್ರಿಕಲ್ ಕಂಪನಿ ಟೆಂಡರ್ ಪಡೆದುಕೊಂಡಿತ್ತು. ಆಗಸ್ಟ್‌ನಲ್ಲಿ ಸರ್ಕಾರದಿಂದ ಒಪ್ಪಿಗೆಯೂ ದೊರೆತು, ಒಪ್ಪಂದ ಪ್ರಕಾರ ಕಂಪನಿ 77 ಸಾವಿರ ಬೀದಿದೀಪ ಅಳವಡಿಸಲು, 94 ತಿಂಗಳ ಬ್ಯಾಂಕ್ ಗ್ಯಾರಂಟಿ ನೀಡಬೇಕಿತ್ತು. ಆದರೆ, ಟೆಂಡರ್ ಪಡೆದ ಕಂಪನಿ ಪಾಲಿಕೆ ಜತೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸೋಮವಾರ ಟೆಂಡರ್‌ ಪಡೆದ ಮಾಲಿಕನೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಸಮರ್ಪಕವಾಗಿ ಸ್ಪಂದಿಸದೆ ಇದ್ದಲ್ಲಿ ಈ ಯೋಜನೆ ಕೈಬಿಡಲು ನಿರ್ಧರಿಸಲಾಗಿದೆ ಎಂದು ಆಯುಕ್ತ ರುದ್ರೇಶ ಘಾಳಿ ಹೇಳಿದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ