ಶಿವಾಜಿ ನಗರದಲ್ಲಿ ಬೀದಿ ವ್ಯಾಪಾರ ಮಾಮೂಲು

KannadaprabhaNewsNetwork |  
Published : Jul 23, 2026, 03:45 AM ISTUpdated : Jul 23, 2026, 04:31 AM IST
Shivaji Nagar

ಸಾರಾಂಶ

ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಲು ಮಂಗಳವಾರ ತೆರಳಿದ್ದ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಸ್ಥಳವನ್ನು ಹೊರತು ಪಡಿಸಿ ಶಿವಾಜಿನಗರದ ಉಳಿದ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಎಂದಿನಂತೆ ಮುಂದುವರಿದಿದೆ.

 ಬೆಂಗಳೂರು :  ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಲು ಮಂಗಳವಾರ ತೆರಳಿದ್ದ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಸ್ಥಳವನ್ನು ಹೊರತು ಪಡಿಸಿ ಶಿವಾಜಿನಗರದ ಉಳಿದ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಎಂದಿನಂತೆ ಮುಂದುವರಿದಿದೆ.

ಬುಧವಾರ ಶಿವಾಜಿನಗರದ ಬಸ್ ನಿಲ್ದಾಣದ ಸಮೀಪ ಗಲಾಟೆ ನಡೆದ ಸ್ಥಳದಲ್ಲಿ ಮಾತ್ರ ಯಾವುದೇ ವ್ಯಾಪಾರ ಇರಲಿಲ್ಲ. ಆದರೆ, ರಸೆಲ್ ಮಾರ್ಕೆಟ್, ಚರ್ಚ್ ಮುಂಭಾಗದಲ್ಲಿ ವ್ಯಾಪಾರ ಎಂದಿನಂತೆ ಸಾಗಿತ್ತು. ಚರ್ಚ್ ಗೋಡೆಗೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಿಗಳು ಎರಡು ಅಡಿಗಳಷ್ಟು ಜಾಗ ಮಾತ್ರ ಪಾದಚಾರಿಗಳಿಗೆ ಬಿಟ್ಟು ಉಳಿದ ಕಡೆ ವ್ಯಾಪಾರ ನಡೆಸುತ್ತಿದ್ದಾರೆ.

ಶಿವಾಜಿನಗರ ಬಸ್ ನಿಲ್ದಾಣದ ಪಾದಚಾರಿ ಮಾರ್ಗದಲ್ಲಿ ಇರುವ ಗಣೇಶನ ಗುಡಿ ಹಾಗೂ ಕನ್ನಡ ಧ್ವಜ ಸ್ತಂಭವನ್ನು ತೆರವುಗೊಳಿಸಲು ಯತ್ನಿಸಿದ್ದರಿಂದ ತಾನು ಹಲ್ಲೆಗೆ ಮುಂದಾಗಿದ್ದಾಗಿ ಆರೋಪಿ ಬಸವರಾಜ್ ಪಡುಕೋಟೆ ಹೇಳಿಕೆ ನೀಡಿದ್ದ. ಇವುಗಳನ್ನು ಪಾಲಿಕೆ ತೆರವುಗೊಳಿಸಿಲ್ಲ. ಯಾವುದೇ ರೀತಿ ಹಾನಿಯೂ ಆಗಿಲ್ಲ. ರಸೆಲ್ ಮಾರ್ಕೆಟ್, ಚಾಂದಿನಿ ಚೌಕ್ ಅಕ್ಕಪಕ್ಕದ ರಸ್ತೆಗಳಲ್ಲಿ ಕೆಲ ದಿನಗಳ ಹಿಂದೆ ಪಾಲಿಕೆ ಸಿಬ್ಬಂದಿ ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಿದ್ದರು. ಆದರೆ, ಈ ರಸ್ತೆಗಳಲ್ಲಿ ವ್ಯಾಪಾರಿಗಳು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾರೆ. ಈ ಸಂಬಂಧ ಎಂಜಿನಿಯರ್ ಅತೀಕ್ ಅವರನ್ನು ಕೇಳಿದಾಗ, ಮೊದಲ ಬಾರಿಗೆ ಒತ್ತುವರಿ ತೆರವು ಮಾಡುವುದು ನಮ್ಮ ಕರ್ತವ್ಯ, ನಂತರ ಒತ್ತುವರಿಯಾಗದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.

ಪೊಲೀಸರಿಗೆ ಮೊದಲೇ ಮಾಹಿತಿ ನೀಡಿಕೆ:

ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡುವ ಸಂಬಂಧ ಆಯಾ ಸ್ಥಳೀಯ ಪೊಲೀಸ್ ಠಾಣೆಗೆ ನಗರಪಾಲಿಕೆ ಅಧಿಕಾರಿಗಳು ಒಂದು ದಿನ ಮುಂಚಿತವಾಗಿ ಪತ್ರ ಮುಖೇನ ಒತ್ತುವರಿ ತೆರವು ಮಾಡುವ ಸಂಬಂಧ ಮನವಿ ಸಲ್ಲಿಸಬೇಕು. ಆದರೆ, ಮಂಗಳವಾರ ಶಿವಾಜಿನಗರದಲ್ಲಿ ಒತ್ತುವರಿ ತೆರವು ಕುರಿತು ಜಿಬಿಎ ಅಧಿಕಾರಿಗಳು ಪತ್ರ ಬರೆದು ತಿಳಿಸಿರಲಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಈ ಬಗ್ಗೆ ಕನ್ನಡಪ್ರಭ, ಕೇಂದ್ರ ವಿಭಾಗದ ಎಂಜಿನಿಯರ್ ಅತೀಕ್ ಅವರನ್ನು ಮಾತನಾಡಿಸಿದಾಗ, ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಬಿಎ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯೇ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಆಗ ಸ್ಥಳಕ್ಕೆ 4 ಮಂದಿ ಪೊಲೀಸರು ಆಗಮಿಸಿದ್ದರು. ಆದರೆ, ಮಧ್ಯಾಹ್ನದ ನಂತರ ಹಲ್ಲೆ ಘಟನೆ ನಡೆದಿದೆ ಎಂದರು.

ಪ್ರತಿದಿನವೂ ಒಂದಲ್ಲ ಒಂದು ರಸ್ತೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತದೆ. ಪ್ರತಿದಿನ ಪತ್ರ ಬರೆಯಲು ಆಗುವುದಿಲ್ಲ. ವಿಷಯ ತಿಳಿಸಿದ್ದೇವೆ. ಸಚಿವರೂ ಎಲ್ಲ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಸಭೆ ಕರೆದು ಒತ್ತುವರಿ ತೆರವು ಮಾಡಲು ಸೂಚಿಸಿ, ಪರಸ್ಪರ ಸಹಕಾರ ನೀಡಬೇಕೆಂದು ಎಲ್ಲ ಇಲಾಖೆಗಳಿಗೂ ಹೇಳಿದ್ದಾರೆ. ಅದರಂತೆ ನಾವು ವಿಷಯ ತಿಳಿಸಿದ್ದೇವೆ. ಈಗ 15ದಿನದಿಂದಲೂ ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಎಲ್ಲಿಯೂ ಇಂತಹ ಘಟನೆ ನಡೆದಿರಲಿಲ್ಲ ಎಂದರು.

ಸೂಕ್ತ ಬಂದೋಬಸ್ತ್ ಏರ್ಪಡಿಸಿ:

ಶಿವಾಜಿನಗರ ಹಲ್ಲೆ ಘಟನೆ ಸಂಬಂಧ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಜಿಬಿಎ ನೌಕರರು ಮುಖ್ಯ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು. ಜಿಬಿಎ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಒತ್ತುವರಿ ತೆರವು ಸಮಯದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು. ಈ ಸಮಯದಲ್ಲಿ ಪೊಲೀಸರಿಂದ ಬಿಗಿ ಭದ್ರತೆ ನೀಡಬೇಕು. ಭದ್ರತೆ ನೀಡಿದರೆ ಮಾತ್ರ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸುವುದು ಎಂಬ ಅಂಶವನ್ನು ಪ್ರಮುಖವಾಗಿ ಚರ್ಚಿಸಲಾಯಿತು. ಸಭೆ ನಂತರ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಪಾಲಿಕೆ ಅಧಿಕಾರಿ, ನೌಕರರಿಗೆ ಸೂಕ್ತ ಬಂದೋಬಸ್ತ್ ನೀಡಬೇಕು, ಪಾಲಿಕೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾರ್ಷಲ್‌ಗಳು ಯಾವುದೇ ಒತ್ತುವರಿ ಮತ್ತು ಇನ್ನಿತರೆ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸದೆ ಇರುವುದರಿಂದ ಅವರ ಸೇವೆಯನ್ನು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಎಸ್‌ಒಪಿ ನಿಯಮಗಳು

ಒತ್ತುವರಿ ತೆರವು ಕಾರ್ಯಾಚರಣೆಗೂ ಮುನ್ನ ಸ್ಥಳೀಯ ಪೊಲೀಸರಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು, ಬೆಸ್ಕಾಂ ಸೇರಿದಂತೆ ಅಗತ್ಯ ಸಂಸ್ಥೆಗಳಿಗೂ ಕಾರ್ಯಾಚರಣೆ ಬಗ್ಗೆ ಮಾಹಿತಿ ಇರಬೇಕು, ಕಾರ್ಯಾಚರಣೆ ‌ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಬಂದೋ ಬಸ್ತ್, ತೆರವು ನಡೆಯುವ ವೇಳೆ ಎಚ್ಚರಿಕೆ ಅಥವಾ ಕೆಲಸ ಪ್ರಗತಿಯಲ್ಲಿದೆ ಎನ್ನುವ ಫಲಕ ಅಳವಡಿಕೆ, ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ಸುಗಮ ಸಂಚಾರಕ್ಕಾಗಿ ಸಂಚಾರಿ ಪೊಲೀಸರ ನಿಯೋಜನೆ ಮಾಡಬೇಕು. ಆಯಾ ಪ್ರದೇಶಕ್ಕೆ ಅನುಗುಣವಾಗಿ ಕ್ರೇನ್ ಅಥವಾ ಜೆಸಿಬಿ ರೀತಿಯ ಬೃಹತ್ ಯಂತ್ರಗಳ ಬಳಕೆಯಾದರೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗೂಗಲ್ ಕಂಪನಿಯ ಜತೆ ವಿಟಿಯು ಒಪ್ಪಂದ
ಮಾಧ್ಯಮಕ್ಕೆ ಸಾಮಾಜಿಕ ಕಳಕಳಿ ಅಗತ್ಯ : ಆಯಿಷಾ