ಕನ್ನಡಪ್ರಭ ವಾರ್ತೆ, ತುಮಕೂರುಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಬೇಕು, ಸಂಘಟನೆಯಾಗಿ ಶಕ್ತಿ ಬೆಳೆಸಿಕೊಂಡು ಸರ್ಕಾರದ ಸೌಲಭ್ಯ ಪಡೆಯುವುದು, ಪರಸ್ಪರ ಸಹಕಾರದಿಂದ ಬೆಳವಣಿಗೆ ಆಗಬೇಕು ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶ್ರಮ ಜೀವಿ ಬೀದಿಬದಿ ವ್ಯಾಪಾರಿಗಳ ರಾಜ್ಯ ಸಂಘದಿಂದ ಸೋಮವಾರ ನಗರದ ಕೆ.ಆರ್.ಬಡಾವಣೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಬೀದಿಬದಿ ವ್ಯಾಪಾರಿಗಳು ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಆವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ., ಇಂತಹ ವ್ಯವಹಾರಸ್ಥರಿಗೆ ಸರ್ಕಾರದ ವಿವಿಧ ಯೋಜನೆಗಳು, ಸವಲತ್ತುಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿ ಅವರಿಗೆ ಅವುಗಳ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.ಬಡವರ ಮನೆ ಚಿಕ್ಕದಾದರೂ ಮನಸ್ಸು ದೊಡ್ಡದು, ಶ್ರೀಮಂತರ ಮನೆ ದೊಡ್ಡದಾಗಿದ್ದರೂ ಅವರ ಮನಸ್ಸು ಚಿಕ್ಕದು. ಕನ್ನಡದ ಬಗ್ಗೆ ಪ್ರೀತಿ ಅಭಿಮಾನ, ರಾಜ್ಯೋತ್ಸವ ಆಚರಣೆ ಮಾಡುವುದು ಇಂತಹ ಬಡವರ್ಗದ ಜನರೇ ಹೆಚ್ಚು. ಶ್ರೀಮಂತರು ರಾಜ್ಯೋತ್ಸದಂತಹ ಆಚರಣೆಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಕನ್ನಡ ಪ್ರೇಮ ಇಂತಹವರಲ್ಲಿ ಮನೆಮಾಡಿದೆ ಎಂದರು.ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ ಮಾತನಾಡಿ, ಶ್ರಮಜೀವಿ ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಿ ಒಂದು ಸಹಕಾರ ಸಂಘ ಆರಂಭಿಸಿ, ಪರಸ್ಪರ ಆರ್ಥಿಕ ನೆರವು ಪಡೆದುಕೊಂಡು ಅಭಿವೃದ್ಧಿಯಾಗುವ ಬಗ್ಗೆ ಚಿಂತನೆ ಮಾಡಬೇಕು. ದೊಡ್ಡ ಬ್ಯಾಂಕುಗಳಲ್ಲಿ ಸಣ್ಣ ವ್ಯಾಪಾರಿಗಳು ಸಾಲ ಪಡೆಯುವುದು ಸುಲಭವಲ್ಲ, ಈ ಪರಿಸ್ಥಿತಿಯಲ್ಲಿ ನಿಮ್ಮದೇ ಒಂದು ಹಣಕಾಸು ಸಂಸ್ಥೆ ಇದ್ದರೆ ಸುಲಭವಾಗಿ ಸಾಲ ಪಡೆದು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳಬಹುದು ಎಂದರು.ಕೇಂದ್ರ ಸರ್ಕಾರದಿಂದ ಬೀದಿಬದಿ ವ್ಯಾಪಾರಿಗಳಿಗೆ ಆರಂಭಿಕವಾಗಿ 10 ಸಾವಿರ ರೂ.ಸಾಲ ನೀಡುವ ಯೋಜನೆಯಿದೆ, ಯೋಜನೆಯ ಸಾಲ ತೀರಿಸಿ ಒಂದು ಲಕ್ಷ ರು. ವರೆಗೂ ಸಾಲ ಪಡೆಯಲು ಅವಕಾಶವಿದೆ. ಯಾವುದೇ ಸಾಲ ಪಡೆದಾಗ ಅದನ್ನು ವ್ಯವಹಾರಕ್ಕೆ ಬಳಸಿಕೊಂಡು ಅದರಿಂದ ಅನುಕೂಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ವ್ಯಾಪಾರ ವ್ಯವಹಾರದಲ್ಲಿ ಶಿಸ್ತು ಬೆಳೆಸಿಕೊಂಡರೆ ಬೆಳವಣಿಗೆ ಕಾಣಬಹುದು ಎಂದು ಹೇಳಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯ ಅಧ್ಯಕ್ಷ ಎಂ.ಗೋಪಿ ಅವರ ಇದೇ ಸಂದರ್ಭದಲ್ಲಿ ತಮ್ಮ ೫೦ನೇ ಜನ್ಮದಿನ ಆಚರಿಸಿಕೊಂಡರು. ಇದರ ಅಂಗವಾಗಿ ಮಹಿಳೆಯರಿಗೆ ಸೀರೆ, ಮನೆ ಬಳಕೆ ಪದಾರ್ಥಗಳನ್ನು, ಶಾಲಾ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಿದರು.ಮುಖಂಡರಾದ ಟಿ.ಆರ್.ಸದಾಶಿವಯ್ಯ, ಕನ್ನಡ ಪ್ರಕಾಶ್, ರಾಜ್ಯ ಸಂಘದಗೌರವಾಧ್ಯಕ್ಷ ಎಂ.ಬಿ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ರಾಜಣ್ಣ, ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗೇಶ್ವರ, ಉಪಾಧ್ಯಕ್ಷ ಕೆಂಪಯ್ಯ, ಸಹ ಕಾರ್ಯದರ್ಶಿ ಆರ್ಯುಗಂ, ನಿರ್ದೇಶಕರಾದ ವಿಜಯಕುಮಾರ್,ಮಂಜುಳಾ, ಚಂದ್ರಮ್ಮ, ಜಿಲ್ಲಾಧ್ಯಕ್ಷ ರಾಜಣ್ಣ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.