ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಅಗತ್ಯ

KannadaprabhaNewsNetwork |  
Published : Nov 04, 2025, 01:15 AM IST
ಬೀದಿ ನಾಯಿಗಳಿಗೆ ಹಿಂಸಿಸದೆ ಸಂತಾನ ಹರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಪಪಂ ಸದಸ್ಯರ ಒತ್ತಾಯ | Kannada Prabha

ಸಾರಾಂಶ

ಬೀದಿ ಬದಿ ವ್ಯಾಪಾರಿಗಳು ಸುರಕ್ಷಿತ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡದೇ ನಡು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರದ ವೇಳೆ ವಾಹನಗಳಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಅಧಿಕಾರಿಗಳ ವಿರುದ್ಧ ಸದಸ್ಯರು ಸೋಮವಾರ ಸಾಮಾನ್ಯ ಸಭೆಯಲ್ಲಿ ಅಸಾಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಬೀದಿ ಬದಿ ವ್ಯಾಪಾರಿಗಳು ಸುರಕ್ಷಿತ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡದೇ ನಡು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರದ ವೇಳೆ ವಾಹನಗಳಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಅಧಿಕಾರಿಗಳ ವಿರುದ್ಧ ಸದಸ್ಯರು ಸೋಮವಾರ ಸಾಮಾನ್ಯ ಸಭೆಯಲ್ಲಿ ಅಸಾಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತ್ತು.ಪ.ಪಂ ಅಧ್ಯಕ್ಷೆ ಅನಿತಾ ನೇತೃತ್ವದಲ್ಲಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಂಜಾನೆ ೫ರಿಂದಲೇ ಪೋಸ್ಟ್ ಆಫೀಸ್ ಹತ್ತಿರ ನಡು ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರದ ವಹಿವಾಟುವಿನಲ್ಲಿ ತೊಡಗಿದ್ದು, ಖಾಸಗಿ ಬಸ್‌ಗಳು ನಗರದೊಳಗೆ ವೇಗವಾಗಿ ಸಂಚರಿಸುವುದರಿಂದ ರಸ್ತೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ನೋವುಂಟಾದರೆ ಹೊಣೆ ಯಾರು? ಇದಕ್ಕೆ ಪಪಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸುರಕ್ಷಿತ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಿ ಮುಂದೆ ನಡೆಯುವ ದುರಂತವನ್ನು ತಪ್ಪಿಸುವಂತೆ ಒತ್ತಾಯ ಮಾಡಿದರು.ಬೀದಿ ನಾಯಿಗಳ ಶಸ್ತ್ರಚಿಕಿತ್ಸೆಗೆ ಚಿಂತನೆ: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಬಲಿಯಾಗುತ್ತಿರುವ ಪ್ರಕರಣಗಳ ಸಂಖೈ ದಿನನಿತ್ಯ ವಾಹಿನಿಗಳಲ್ಲಿ ನೋಡುತ್ತಿದ್ದೇವೆ, ಸರ್ವೋಚ್ಛ ನ್ಯಾಯಾಲಯ ಆದೇಶದ ಮೇರೆಗೆ ಮತ್ತು ಪ್ರಾಣಿ ದಯಾ ಸಂಘದ ಜೊತೆ ಚರ್ಚಿಸಿ ಬೀದಿ ನಾಯಿಗಳಿಗೆ ಹಿಂಸಿಸದೆ ಸಂತಾನ ಹರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಸಾರ್ವಜನಿಕರು ಬೀದಿ ನಾಯಿಗಳ ಹಾವಳಿಗೆ ಬಲಿಯಾಗದಂತೆ ಜಾಗೃತಿ ವಹಿಸುವ ಉದ್ದೇಶದ ಬಗ್ಗೆ ಪ.ಪಂ ಮುಖ್ಯಾಧಿಕಾರಿ ಸಭೆಯಲ್ಲಿ ಪ್ರಸ್ತಾಪಿಸಿದ್ದು ಸದಸ್ಯರು ಕೂಡ ಈ ಚಿಂತನೆಗೆ ಸಾಥ್ ನೀಡಿದ್ದಾರೆ.

ಕೊಳಚೆ ಮಂಡಳಿಯೆಂದು ಹೆಸರಿಡಿ ನಿರಾಶ್ರಿತರಿಗೆ ಸೂರು ಕಲ್ಪಿಸುವ ಭರವಸೆ ನೀಡಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ, ಅಧಿಕಾರವೇ ಮುಗಿಯುತ್ತಾ ಬಂದರೂ ಇಲ್ಲಿಯವರೆಗೂ ಕಾಮೇನಹಳ್ಳಿ ಬಳಿ ಸೂರು ವಂಚಿತರಿಗೆಂದು ಗುರುತಿಸಿದ ಸ್ಥಳವನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಲಕ್ಷ್ಯ ಮಾಡುತ್ತಿದ್ದು, ಕೊಳಚೆ ನಿರ್ಮೂಲನಾ ಮಂಡಳಿ ಹೆಸರು ತೆಗೆದು ಕೊಳಚೆ ಮಂಡಳಿಯೆಂದು ಹೆಸರಿಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸದಸ್ಯ ನಟರಾಜ್ ಧ್ವನಿ ಎತ್ತಿ ಅಸಾಮಾಧಾನ ವ್ಯಕ್ತಪಡಿಸಿದರು.ದುಶ್ಚಟಕ್ಕೆ ಯುವಕರು ಬಲಿ ಅಬಕಾರಿ ಅಧಿಕಾರಿಗಳ ಮೌನ ಪಟ್ಟಣದ ಹಲವು ವೈನ್ಸ್ ಮಾಲೀಕರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಣದ ಅಮಿಷವೊಡ್ಡಿ ಮುಂಜಾನೆಯಿಂದಲೇ ತೆರೆಮರೆಯಲ್ಲಿ ಅಕ್ರಮವಾಗಿ ಮದ್ಯ ವಿತರಣೆ ಮಾಡುತ್ತಿದ್ದು, ಪಟ್ಟಣದ ಬಡ ಯುವಕನೊಬ್ಬ ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟಿದ್ದಾನೆ. ಇದೇ ರೀತಿ ನೂರಾರು ಮಂದಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಪಪಂ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮವಹಿಸದ ಕಾರಣ ಈ ಅಕ್ರಮ ಮದ್ಯಮಾರಾಟ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಉಸ್ನಾಫಾರಿಯಾ, ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಓಬಳರಾಜು, ಲಕ್ಷ್ಮೀನಾರಾಯಣ್, ಎ.ಡಿ ಬಲರಾಮಯ್ಯ, ನಟರಾಜ್ ಕೆ.ಎನ್, ನಂದೀಶ್, ಭಾರತಿ ಸಿದ್ದಮಲ್ಲಪ್ಪ, ಭಾಗ್ಯಮ್ಮ, ಕಾವ್ಯಶ್ರೀ, ಪುಟ್ಟನರಸಪ್ಪ, ನಾಗರಾಜು, ನಾಮಿನಿ ಸದಸ್ಯರಾದ ಮಂಜುಳಾ ಗೋವಿಂದರಾಜು, ಫಯಾಜ್ ಅಹಮದ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ