ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ನಡೆದ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರಗಳು ಪೋಷಣೆ ಮಾಡುವುದನ್ನು ಬಿಟ್ಟು ಬಡವರು, ಶೋಷಿತರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಬೇಕು. ಜೊತೆಗೆ ವೈದ್ಯಕೀಯ ವ್ಯವಸ್ಥೆ ಹಾಗೂ ಉದ್ಯೋಗ ದೊರಕಿಸಿಕೊಟ್ಟರೆ ಕುಟುಂಬಗಳು ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಲಿವೆ ಎಂದರು.
ಅಂಬೇಡ್ಕರ್ ಅವರ ಕೊಟ್ಟಿರುವ ಸಂವಿಧಾನದ ಜೊತೆಗೆ ಜೀವನದ ಸಂವಿಧಾನವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. 12ನೇ ಶತಮಾನದಲ್ಲಿ ಬಸವಣ್ಣ ಅವರ ಕೊಟ್ಟ ವಚನಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ನಡೆಯಬೇಕು. ಹುಟ್ಟಿದ ಪ್ರತಿಯೊಬ್ಬರು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇದರಿಂದ ಹೊರಬಂದು ಕನ್ನಡದ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ದೊಡ್ಡದೊಡ್ಡ ಸಾಧನೆ ಮಾಡಿರುವುದನ್ನು ಉದಾಹರಣೆಗೆ ತೆಗೆದುಕೊಂಡು ಸರ್ಕಾರಿ ಶಾಲೆಗಳನ್ನು ರಕ್ಷಣೆ ಮಾಡಬೇಕಾಗಿದೆ ಎಂದರು.
100 ವರ್ಷ ತುಂಬಿದ ಬನ್ನಂಗಾಡಿ ಗ್ರಾಮದ ಶಾಲೆಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಸೇರಿ ಇಷ್ಟೊಂದು ದೊಡ್ಡಮಟ್ಟದ ಶತಮಾನೋತ್ಸವ ಆಚರಿಸುತ್ತಿರುವುದು ಸಂತೋಷ ಉಂಟು ಮಾಡಿದೆ. ನಮ್ಮ ಕನ್ನಡ ಭಾಷೆಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬರು ದೇಶ, ರಾಜ್ಯವನ್ನು ಪ್ರೀತಿಸುವ ಜತೆಗೆ ನಮ್ಮ ಕನ್ನಡ ಭಾಷೆ ಹಾಗೂ ಸಂಪತ್ತನ್ನು ರಕ್ಷಣೆ ಮಾಡಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಜಗತ್ತಿನ್ನಲ್ಲಿ ಮಕ್ಕಳ ಬೆಳವಣಿಗೆ ಕಂಡು ಖುಷಿಪಡುವ ಜೀವಗಳೆಂದರೆ ಪೋಷಕರು ಹಾಗೂ ಗುರುಗಳು ಮಾತ್ರ. ಎಲ್ಲರೂ ಸರ್ಕಾರಿ ಶಾಲೆಗಳ ಪ್ರಗತಿಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಗೈರಾಗಿದ್ದರು. ಇದಕ್ಕೂ ಮುನ್ನ ಗ್ರಾಮದ ಸರ್ಕಾರಿ ಶಾಲೆಯ ಆವರಣದಿಂದ ಹೊರಟ ಮೆರವಣಿಗೆಯಲ್ಲಿ ಬೆಳ್ಳಿ ಸಾರೋಟ್‌ನಲ್ಲಿ ಶಾರದಾಂಭೆ ಫೋಟೋ ಇಟ್ಟು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪೂಜಾಕುಣಿತ, ವೀರಗಾಸೆ, ತಮಟೆ, ಗಾರುಗಿಗೊಂಬೆ, ಪೂರ್ಣಕುಂಭ, ಡೊಳ್ಳುಕುಣಿತ, ಹುಲಿವೇಷ, ಶಾಲಾ ಮಕ್ಕಳು ಮಹಿಳೆಯರಿಂದ ಕೋಲಾಟ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.ಗ್ರಾಮದ ಎಲ್ಲಾ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಗ್ರಾಮಸ್ಥರು, ಮುಖಂಡರು ಮೆರವಣಿಗೆಯಲ್ಲಿ ಸಾಗಿದರು. ಮಧ್ಯಾಹ್ನ ಓಳಿಗೆ ಊಟ ನೀಡಲಾಯಿತು. ಶಾಲೆಯನ್ನು ಹೂವು ಹಾಗೂ ವಿದ್ಯುತ್ ದೀಪಾಲಂಕಾರಿದಿದ ಅಲಂಕರಿಸುವ ಜೊತೆಗೆ ಪ್ರಮುಖ ಬೀದಿಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಠಿ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ರೈತನಾಯಕಿ ಸುನೀತಪುಟ್ಟಣ್ಣಯ್ಯ, ಉದ್ಯಮಿ ಅರವಿಂದ್ ರಾಘವನ್ ಮಾತನಾಡಿದರು. ಶಾಲೆಗೆ ಭೂಮಿ ನೀಡಿದ ದಾನಿಗಳು, ಶಾಲೆಯಲ್ಲಿ ಕೆಲಸ ಮಾಡಿದ ಹಿರಿಯ ನಿವೃತ್ತ ಶಿಕ್ಷಕರು, ಹಾಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಹಾಗೂ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಪದ್ಮಚಂದ್ರು, ತಾಪಂ ಮಾಜಿ ಅಧ್ಯಕ್ಷ ಬಿ.ಡಿ.ಹುಚ್ಚೇಗೌಡ, ತಾಪಂ ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್, ನಿವೃತ್ತ ಶಿಕ್ಷಕ ಶಿವೇಗೌಡ, ಜಿಲ್ಲಾ ಕುರುಬ ಸಮಾಜದ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ಪಿ.ಎಲ್.ಡಿ.ಬ್ಯಾಂಕ್ ನಿದೇರ್ಶಕ ಜಿ.ಡಿ.ನಂಜೇಗೌಡ(ವಾಸು), ವೀರಶೈವ ಮುಂಖಡ ಸಾಹಿತಿ ಸಿದ್ದಲಿಂಗಪ್ಪ, ಸಿಡಿಸಿ ಉಪಾಧ್ಯಕ್ಷ ಬಿ.ಕೆ.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಮಂಜಯ್ಯ, ಹಳೆಯ ವಿದ್ಯಾರ್ಥಿ ಪದ್ಮ ಬಿ.ಸಿ.ಪುಟ್ಟೇಗೌಡ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಯಶ್ವಂತ್, ಬಿಜೆಪಿ ತಾಲೂ ಅಧ್ಯಕ್ಷ ಧನಂಜಯ್ಯ, ಮುಖಂಡರಾದ ಎಚ್.ಎನ್.ಮಂಜುನಾಥ್, ಬಿ.ಜೆ.ಸ್ವಾಮಿ, ಮೇಳಪುರ ರವಿ ಸೇರಿದಂತೆ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕಿಯರು ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಮುಖಂಡರು ಹಾಜರಿದ್ದರು.