ಸ್ವಂತ ಅಭಿವೃದ್ಧಿ ಜೊತೆಗೆ ದೇಶದ ಆರ್ಥಿಕತೆ ಸದೃಢಗೊಳಿಸಿ

KannadaprabhaNewsNetwork | Published : Jan 24, 2024 2:01 AM

ಸಾರಾಂಶ

ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಯಾವುದೇ ಸರ್ಕಾರಗಳು ಯುವಜನತೆಗೆ ಮಾರ್ಗ ತೋರಿಸಿ ಪ್ರೋತ್ಸಾಹಿಸಿ ಅವರನ್ನು ಉದ್ಯಮಿಗಳನ್ನಾಗಿ ಮಾಡುವ ಉದ್ದೇಶ ಹೊಂದಿರಬೇಕು ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ದೊರೆತ ಕೆಲಸದಲ್ಲಿ ಅನುಭವಿಯಾಗಿ, ಉದ್ಯೋಗ ಪಡೆದುಕೊಂಡು ಅಭಿವೃದ್ದಿ ಹೊಂದಬೇಕೆಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಬಾಗಲಕೋಟೆ ನವನಗರದ ಕಲಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಉದ್ಯೋಗ ವಿನಿಮಯ ಕಚೇರಿ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಸರ್ಕಾರಗಳು ಯುವಜನತೆಗೆ ಮಾರ್ಗ ತೋರಿಸಿ ಪ್ರೋತ್ಸಾಹಿಸಿ ಅವರನ್ನು ಉದ್ಯಮಿಗಳನ್ನಾಗಿ ಮಾಡುಬ ಉದ್ದೇಶ ಹೊಂದಿರಬೇಕು ಎಂದರು.

ಈಗ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ಇದ್ದು, ಯುವಜನತೆ ಕೇವಲ ಸರ್ಕಾರಿ ಕೆಲಸಕ್ಕೆ ಅವಲಂಬಿತರಾಗದೇ ಅದಕ್ಕಿಂತ ಹೆಚ್ಚಿನ ಅವಕಾಶವಿರುವ ಉದ್ಯೋಗಗಳನ್ನು ಮಾಡಿ ತಾವು ಅಭಿವೃದ್ಧಿ ಹೊಂದುವುದರ ಜೊತೆಗೆ ದೇಶದ ಆರ್ಥಿಕತೆ ಸದೃಢಗೊಳಿಸಬೇಕು. ಜೀವನದಲ್ಲಿ ಯಾವುದೇ ಕಠಿಣ ಶ್ರಮ ಕೈಗೊಳ್ಳದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಉದ್ಯೋಗ ಆರಂಭಕ್ಕಿಂತ ಮೊದಲೇ ಹಾನಿಯಾಗುವುದು ಲಾಭವಾಗುವುದು ಎಂಬ ಗೊಂದಲದಿಂದ ಹೊರಬರಬೇಕು. ಜೇಡರ ಹುಳು 20 ಬಾರಿ ಸೋತು 21ನೇ ಬಾರಿಗೆ ಗುರಿ ಮುಟ್ಟುವಂತೆ ಯುವಜನರು ಸಹ ನಿರಂತರ ಪ್ರಯತ್ನದಲ್ಲಿರಬೇಕು ಎಂದರು.

ಸಮಾಜದಲ್ಲಿ ಒಬ್ಬ ಯುವಕ ಮುಂದೆ ಬಂದರೆ ಅವನ ಹಿಂದೆ ಕನಿಷ್ಟ 30 ರಿಂದ 40 ಜನ ಹಿಂಬಾಲಕರಾಗುತ್ತಾರೆ. ಇಂದು ಕೇಂದ್ರ ಮತ್ತು ರಾಜ್ಯ ಸರಕಾರವು ಸ್ವಯಂ ಉದ್ಯೋಗಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. 2023-24ನೇ ಸಾಲಿನಲ್ಲಿ 350 ಸ್ವಸಹಾಯ ಸಂಘಗಳು ರಚನೆಗೊಂಡಿದ್ದು, ಅದರಲ್ಲಿ 160 ಜನರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಪ್ರಧಾನಮಂತ್ರಿ ಆತ್ಮ ನಿರ್ಭರದಡಿ ಮೊದಲ ಕಂತಿನಲ್ಲಿ 8926 ಜನರಿಗೆ ₹ 10 ಸಾವಿರ ರೂಗಳಂತೆ ಸಾಲ ನೀಡಿದ್ದು, 2ನೇ ಕಂತಿನಲ್ಲಿ 2986 ಜನರಿಗೆ ₹ 20 ಸಾವಿರ ಸಾಲ ನೀಡಲಾಗಿದೆ. 3ನೇ ಕಂತಿನಲ್ಲಿ 456 ಜನರಿಗೆ 50 ಸಾವಿರದಂತೆ ಸಾಲ ಒದಗಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಯುವಕರು ತಮ್ಮ ವಿದ್ಯಾರ್ಹತೆ ಹಾಗೂ ಆಸಕ್ತಿಗೆ ಅನುಗುಣವಾಗಿ ಉದ್ಯೋಗ ದೊರೆಯಲಿ ಎಂದು ಆಶಿಸುತ್ತಾ, ಸರ್ಕಾರ ನೀಡುವ ಕೌಶಲ್ಯ ತರಬೇತಿ ಒಂದು ದಿನದಲ್ಲ. ವರ್ಷದ 365 ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಸರ್ಕಾರದ ಸಮನ್ವಯದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ಕೆಲಸ ಮಾಡುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಯುವನಿಧಿ ಯೋಜನೆ ಜಾರಿಗೆ ತಂದಿದೆ. ಇದರ ಉದ್ದೇಶ ಕೇವಲ ನಿರುದ್ಯೋಗ ಭತ್ಯೆ ಕೊಡುವುದಲ್ಲ,. ಉದ್ಯೋಗ ಪಡೆಯಲು ಕೌಶಲ್ಯ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಪ್ರತಿಯೊಬ್ಬ ಯುವಕರು ಶಿಕ್ಷಣ ಪಡೆಯುವ ಉದ್ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬ ಗುರಿ ಇರುತ್ತದೆ. ನಮ್ಮ ಮುಂದಿನ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳುವ ಸಮಯ ಎಂದು ತಿಳಿದುಕೊಳ್ಳಬೇಕು. ತಮ್ಮ ವಿದ್ಯಾಬ್ಯಾಸಕ್ಕೆ ಹೊಂದುವಂತಹ ಉದ್ಯೋಗ ಪಡೆಯಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ದಿ ಅಧಿಕಾರಿ ಗುರುಪಾದಯ್ಯ ಹಿರೇಮಠ, ತಹಶೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ರಮೇಶ ಜಾದವ, ಭಾರತ ಸ್ಕೌಡ್ಸ ಮತ್ತು ಗೈಡ್ಸ್ನ ಪ್ರಮೋದ ಚೌಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಹಾಗೂ ಚಿದಾನಂದ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article