ಮತದಾನದ ಮೂಲಕ ಪ್ರಜಾಪ್ರಭುತ್ವದ ಬುನಾದಿ ಸದೃಢ: ಪ್ರತೀಕ್ ಬಾಯಲ್

KannadaprabhaNewsNetwork |  
Published : Apr 17, 2024, 01:25 AM IST
ಪ್ರತೀಕ್16 | Kannada Prabha

ಸಾರಾಂಶ

ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಜಿಲ್ಲೆಯ ಪ್ರತಿಯೊಬ್ಬ ಮತದಾರರು ಏ.26 ಹಾಗೂ ಮೇ 7ರಂದು ಮತದಾನ ಮಾಡಬೇಕು ಮತ್ತು ಆ ಮೂಲಕ ದೇಶದ ಪ್ರಜಾಪ್ರಭುತ್ವದ ಬುನಾದಿಯನ್ನು ಸದೃಢಗೊಳಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್ ಹೇಳಿದರು.

ಅವರು ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡುವ ಮೂಲಕ ತಮ್ಮ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿದೆ ಎಂದರು.

ಇತ್ತೀಚಿನ ಚುನಾವಣೆಗಳಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರದ ಪ್ರದೇಶದಲ್ಲಿ ವಾಸಿಸುತ್ತಿರುವವರ ಮತದಾನ ಮಾಡುವ ಪ್ರಮಾಣ ಕಡಿಮೆ ಇದೆ. ಜಿಲ್ಲೆಯಲ್ಲಿ ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಸ್ಥಳಗಳನ್ನು ಸಮೀಕ್ಷೆ ಮಾಡಿ, ಮತದಾನ ಕಡಿಮೆ ಆಗಿರುವ ಕಾರಣ ಗುರುತಿಸಿ, ಅಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮತದಾನದ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ ಎಂದರು.

ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಮತದಾನದ ಕುರಿತು ಸಂದೇಶವನ್ನು ಪಸರಿಸುವ ಮೂಲಕ ಜನರಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ. ಉಡುಪಿ ನಗರದಲ್ಲಿ ಚುನಾವಣೆಗೆ ಮೂರ್ನಾಲ್ಕು ದಿನಗಳ ಮೊದಲು ಮತದಾನ ಜಾಗೃತಿ ಮೂಡಿಸುವ ಬೃಹತ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಹಾಗೂ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ರ‍್ಯಾಂಪ್ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಬಾಯಲ್ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿ.ಪಂ. ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ