ಸ್ವತಂತ್ರ್ಯ ಅಭ್ಯರ್ಥಿಗಳ ಮನವೊಲಿಸಲು ಹರಸಾಹಸ

KannadaprabhaNewsNetwork |  
Published : Oct 09, 2026, 02:00 AM IST
ಚುನಾವಣೆ | Kannada Prabha

ಸಾರಾಂಶ

ಮತಗಳ ವಿಭಜನೆ ತಡೆಯುವ ಉದ್ದೇಶದಿಂದ ಸ್ವತಂತ್ರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆ ದಿನವಾಗಿದ್ದು, ಮತಗಳ ವಿಭಜನೆ ತಡೆಯುವ ಉದ್ದೇಶದಿಂದ ಸ್ವತಂತ್ರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಅ. 6ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟು 18 ಅಭ್ಯರ್ಥಿಗಳು 36 ಪ್ರತಿಗಳಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಅ. 7 ರಂದು ನಡೆದ ಪರಿಶೀಲನೆಯಲ್ಲಿ ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ. ಎರಡು ದಿನಗಳ ನಾಮಪತ್ರ ಹಿಂಪಡೆಯುವ ಅವಧಿಯ ಮೊದಲ ದಿನ ಗುರುವಾರ ಯಾವುದೇ ಅಭ್ಯರ್ಥಿಯೂ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿಲ್ಲ. ನಾಮಪತ್ರಗಳನ್ನು ಹಿಂಪಡೆಯಲು ಶುಕ್ರವಾರವೇ ಅಂತಿಮ ದಿನವಾಗಿದೆ.

ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಹರಡಿಕೊಂಡಿರುವ ಈ ಕ್ಷೇತ್ರದಿಂದ ಒಂದು ಲಕ್ಷ ಸಮೀಪದಲ್ಲಿ ಮತದಾರರನ್ನು ಹೊಂದಿರುವುದರಿಂದ, ತಮ್ಮ ಅಭ್ಯರ್ಥಿಗಳ ಮತಗಳ ಪಾಲನ್ನು ಕಸಿದುಕೊಳ್ಳಬಹುದಾದ ಸ್ಪರ್ಧಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಉತ್ಸುಕವಾಗಿವೆ. ನೇರವಾಗಿ ಅಭ್ಯರ್ಥಿಗಳು ಸಂಪರ್ಕಿಸದೇ ಪಕ್ಷದ ಮುಖಂಡರಿಂದ ಅವರನ್ನು ಸಂಪರ್ಕಿಸುವ ಮೂಲಕ ಮನವೊಲಿಸುವ ಕಾರ್ಯ ನಡೆದಿದೆ.

ಕ್ಷೇತ್ರದಲ್ಲಿ ಕಡಿಮೆ ಮತದಾರರು ಮತ್ತು ಮತದಾನದ ಪ್ರಮಾಣ ಇರುವುದರಿಂದ ಪ್ರತಿ ಮತವೂ ಅತ್ಯಂತ ನಿರ್ಣಾಯಕ. ಕಳೆದ ಮೂರು ಚುನಾವಣೆಗಳಲ್ಲಿ ಸರಾಸರಿ ಮತದಾನದ ಪ್ರಮಾಣ ಶೇ. 62ರಷ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ಮತವೂ ಮುಖ್ಯವಾಗುತ್ತದೆ. ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದಷ್ಟೂ ಮತಗಳು ವಿಭಜನೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ನೇರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು ಪತ್ರಿಕೆಯೊಂದಿಗೆ ಚರ್ಚಿಸಿದರು.

ಈ ಕ್ಷೇತ್ರವನ್ನು ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಸತತ ನಾಲ್ಕು ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರಲ್ಲಿ ಬಿಜೆಪಿಯ ಮೋಹನ್ ಲಿಂಬಿಕಾಯಿ ಕಾಂಗ್ರೆಸ್‌ನ ಈ ಸತತ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು. ಆದರೆ, ಲಿಂಬಿಕಾಯಿ ತಮ್ಮ ಅವಧಿ ಪೂರ್ಣಗೊಳ್ಳುವ ಮುನ್ನವೇ ರಾಜೀನಾಮೆ ನೀಡಿ, ನಂತರ ಕೆಜೆಪಿ ಸೇರಿದ್ದರು.

2014 ಚುನಾವಣೆಯಲ್ಲಿ ಬಿಜೆಪಿಯ ಎಸ್.ವಿ. ಸಂಕನೂರು ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರ ಪುತ್ರ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ವಸಂತ ಹೊರಟ್ಟಿ ಅವರನ್ನು ಸೋಲಿಸಿದ್ದರು. ತೀವ್ರ ಪೈಪೋಟಿ ಇರಬಹುದು ಎಂಬ ಮುನ್ಸೂಚನೆಗಳ ನಡುವೆಯೂ ಸಂಕನೂರು ಅವರು ಭರ್ಜರಿ ಜಯ ಸಾಧಿಸಿದ್ದರು. ಅವರು 22,506 ಮತಗಳನ್ನು ಪಡೆದರೆ, ಹೊರಟ್ಟಿ 8,574 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು.

2020ರ ಚುನಾವಣೆಯಲ್ಲೂ ಸಂಕನೂರು ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ. ಕುಬೇರಪ್ಪ ಮತ್ತು ಜೆಡಿಎಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಸೋಲಿಸುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಚಲಾವಣೆಯಾದ ಒಟ್ಟು 52,041 ಮತಗಳಲ್ಲಿ 43,269 ಮತಗಳು ಕ್ರಮಬದ್ಧವಾಗಿದ್ದವು. ಈ ಹಿನ್ನೆಲೆಯಲ್ಲಿ, ಮತಗಳು ಹಂಚಿಹೋಗುವುದನ್ನು ತಡೆಯಲು ಮತ್ತು ತಮ್ಮ ಅಭ್ಯರ್ಥಿಗಳ ಗೆಲುವಿನ ಅವಕಾಶಗಳನ್ನು ಸುರಕ್ಷಿತವಾಗಿರಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ಸ್ಪರ್ಧಿಗಳ ಸಂಖ್ಯೆಯನ್ನು ಕಡಿಮೆ ಮಾಡುವತ್ತ ಗಮನ ಹರಿಸುತ್ತಿದ್ದಾರೆ.

ತಮ್ಮ ಮತಗಳ ಪಾಲಿಗೆ ಕನ್ನ ಹಾಕಬಹುದಾದ ಸ್ವತಂತ್ರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಲು ಮತ್ತು ಪ್ರಮುಖ ಪಕ್ಷಗಳ ನಡುವೆ ನೇರ ಹಣಾಹಣಿಗೆ ದಾರಿ ಮಾಡಿಕೊಡಲು ಉಭಯ ಪಕ್ಷಗಳ ನಾಯಕರು ಮುಚ್ಚಿದ ಬಾಗಿಲಿನ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ನಾಮಪತ್ರ ಹಿಂಪಡೆಯುವ ಗಡುವು ಮುಕ್ತಾಯಗೊಳ್ಳುವ ಶುಕ್ರವಾರ ಮಧ್ಯಾಹ್ನದ ವೇಳೆಗೆಷ್ಟೇ ಅಂತಿಮ ಚಿತ್ರಣ ಹೊರಬೀಳಲಿದೆ. ಈ ಮಧ್ಯೆ ಗುರುವಾರ ಮಾತ್ರ ಯಾರೊಬ್ಬರು ನಾಮಪತ್ರ ಹಿಂಪಡೆದಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ಅಕ್ಟೋಬರ್ 9 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಅ. 23 ರಂದು ಮತದಾನ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರಿಗೆ ಎಸ್‌ಎಪಿ ನಿಗದಿಪಡಿಸುವಂತೆ ಆಗ್ರಹ
ಜಿಪಂ-ತಾಪಂ ಚುನಾವಣೆ ಮೀಸಲಾತಿ ಪ್ರಕಟ, ಆಕಾಂಕ್ಷಿಗಳಲ್ಲಿ ಹುರುಪು