ಒತ್ತಡ ನಿವಾರಣೆಗೆ ಶಿಬಿರಗಳು ಪೂರಕ: ಎಸ್. ಕಾತ್ಯಾಯಿನಿದೇವಿ

KannadaprabhaNewsNetwork |  
Published : Apr 06, 2026, 01:15 AM IST
50 | Kannada Prabha

ಸಾರಾಂಶ

ಒತ್ತಡದ ಬದುಕು ಸಮಾಜದ ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರಿ ಅನೇಕ ರೋಗಗಳಿಗೆ ಮೂಲವಾಗಿದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ನಕಾರಾತ್ಮಕ ಆಲೋಚನೆ ದೂರಮಾಡಿ ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಈ ಶಿಬಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿದೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಒತ್ತಡ ನಿವಾರಣೆಗೆ ಶಿಬಿರಗಳು ಪೂರಕವಾಗಲಿ ಎಂದು ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕಾತ್ಯಾಯಿನಿ ದೇವಿ ತಿಳಿಸಿದರು.

ಸುತ್ತೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಒತ್ತಡದ ಬದುಕು ಸಮಾಜದ ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರಿ ಅನೇಕ ರೋಗಗಳಿಗೆ ಮೂಲವಾಗಿದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ನಕಾರಾತ್ಮಕ ಆಲೋಚನೆ ದೂರಮಾಡಿ ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಈ ಶಿಬಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿದೆ. ಶ್ರೀಮಠದ ದೈವಿಕ ಪರಿಸರದಲ್ಲಿ ಪಡೆಯುವ ಅನುಭವವೇ ಅನನ್ಯವಾದುದು ಎಂದರು.

ಪತ್ರಿಕೋದ್ಯಮಿ ರಶ್ಮಿ ಕೋಟಿ ಮಾತನಾಡಿ, ಶಿಕ್ಷಣ ಸಂಸ್ಥೆಯ ಗುಣಮಟ್ಟ ಅಳೆಯುವುದು ಅಲ್ಲಿನ ಶಿಕ್ಷಕರಿಂದ. ಶಿಕ್ಷಣ ಪರೀಕ್ಷೆಗೆ ಸೀಮಿತವಲ್ಲ. ಮಕ್ಕಳಿಗೆ ಬದುಕಿನ ಎಲ್ಲಾ ಸವಾಲು ಎದುರಿಸುವ, ಗೆಲುವು ಮತ್ತು ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ, ಆತ್ಮವಿಶ್ವಾಸ ತುಂಬುವ ಶಕ್ತಿಯಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು. ಭಿನ್ನ ಸಾಮರ್ಥ್ಯದಿಂದ ಕೂಡಿರುವ ವಿದ್ಯಾರ್ಥಿಗಳ ಮನಸ್ಥಿತಿಗೆ ಅನುಗುಣವಾಗಿ ಬೋಧಿಸುವ ಕಲೆಯನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು, ಆಗ ಮಾತ್ರ ಶಿಕ್ಷಕ ವೃತ್ತಿ ಆತ್ಮ ತೃಪ್ತಿ ನೀಡುತ್ತದೆ ಎಂದು ನುಡಿದರು.

ಬಸವನಬಾಗೇವಾಡಿಯ ಅಕ್ಕನಾಗಮ್ಮ ಪ್ರೌಢಶಾಲೆ ಶಿಕ್ಷಕ ಅಶೋಕ ಹಂಚಲಿ ಅವರು ನಮ್ಮ ರಾಷ್ಟ್ರದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ. ಮಕ್ಕಳಲ್ಲಿ ದೇಶಭಕ್ತಿ, ಕರುಣೆ, ಅನುಕಂಪ, ಪ್ರೀತಿ ಮೊದಲಾದ ಮೌಲ್ಯ ತುಂಬಬೇಕು. ಭಾರತದ ಸಂಸ್ಕೃತಿ ಪ್ರಪಂಚದಲ್ಲಿಯೇ ಶ್ರೇಷ್ಠವಾಗಿದ್ದು, ಮಕ್ಕಳು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ವೇದ, ಉಪನಿಷತ್ತು, ವಚನ ಸಾಹಿತ್ಯದಲ್ಲಿ ಅಪಾರ ಜ್ಞಾನವಿದ್ದು, ಅವುಗಳನ್ನು ಅಭ್ಯಾಸಿಸಬೇಕು ಎಂದರು.

ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ರಮೇಶ ನರಸಯ್ಯ ಮಾತನಾಡಿ, ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳ ಮಾತೃ. ಇದು ಮುಂದಿನ ಪೀಳಿಗೆಗೆ ಹಾಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದೆ. ಶಿಕ್ಷಕರು ತಮ್ಮ ವೃತ್ತಿಗೆ ನ್ಯಾಯ ಒದಗಿಸಲು ಉಲ್ಲಾಸದಿಂದ ಇರಬೇಕು. ಆರೋಗ್ಯಯುತವಾದ ಜೀವನಕ್ಕೆ ಮತ್ತು ಸಾಧನೆ ಮಾಡಲು, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಜೀವನದಲ್ಲಿ ಉಲ್ಲಾಸ ಇರಬೇಕು ಎಂದರು.

ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ಸಂಜೆ ದೇಸಿ ಆಟಗಳಲ್ಲಿ ಪಾಲ್ಗೊಂಡರು. ಸಂಜೆ ಪ್ರಾರ್ಥನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿಬಿರದಲ್ಲಿ 160 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಎಂ.ಆರ್‌. ಪ್ರತಿಮಾ ಪ್ರಾರ್ಥಿಸಿದರು. ಎಂ.ದೇವಿಕಾ ಸ್ವಾಗತಿಸಿದರು. ಎಸ್‌.ವಿ. ಚೇತನ್ ಕುಮಾರ್ ವಂದಿಸಿದರು. ಎಚ್‌.ಎಂ. ಚೇತನ್ ಕುಮಾರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಭಾರತ ರಾಜಕಾರಣದಲ್ಲಿ ಪ್ರಾತಃ ಸ್ಮರಣೀಯರು
ಶೀಘ್ರ ಬಾಬು ಜಗಜೀವನರಾಮ್‌ ಭವನ ಕಾಮಗಾರಿ ಪೂರ್ಣ