ಕೊಪ್ಪಳ: ಕ್ರೀಡೆಯಲ್ಲಿ ಭಾಗವಹಿಸುವುದು ಆರೋಗ್ಯಕ್ಕೆ ಬಹಳಷ್ಟು ಉಪಯುಕ್ತ ಇದೆ. ಅದರಲ್ಲೂ ಒತ್ತಡದ ಬದುಕಿನಲ್ಲಿ ಇದು ಅತ್ಯಂತ ಸಹಕಾರಿ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಪಂಚಾಯತ್ ರಾಜ್ ನೌಕರರ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆಗಳ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ನೌಕರರು, ಸಿಬ್ಬಂದಿ ನಿತ್ಯದ ಕೆಲಸದ ಜೊತೆ ಬೆಳಗಿನ ಸಮಯದಲ್ಲಿ ಕ್ರೀಡಾಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ. ಎರಡು ದಿನ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲರೂ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.ನಂತರ ಕ್ರೀಡಾ ಧ್ವಜಾರೋಹಣ ನೆರವೇರಿತು. ನಂತರ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕ್ರೀಡಾಕೂಟಕ್ಕೆ ಡಿಸಿ ನಳಿನ್ ಅತುಲ್, ಸಿಇಓ ರಾಹುಲ್ ರತ್ನಂ ಪಾಂಡೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.ಆಟಗಾರರ ಫೋಟೊ ಕ್ಲಿಕ್ಕಿಸಿದ ಸಿಇಒ:ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಕ್ಯಾಮೆರಾ ಹಿಡಿದು ಮೈದಾನಕ್ಕೆ ಇಳಿದು ಪುರುಷ, ಮಹಿಳೆಯರ ರನ್ನಿಂಗ್ ರೇಸ್‌ನ ಫೋಟೋಗಳನ್ನು ಸೆರೆ ಹಿಡಿದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ಸಿಇಓ ರಾಹುಲ್ ರತ್ನಂ ಪಾಂಡೆ ಸರಳತೆಗೆ ಎಲ್ಲ ನೌಕರರು, ಸಿಬ್ಬಂದಿ ಖುಷಿಪಟ್ಟರು. ಜೊತೆಗೆ ಸಿಇಒ ಷಟಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಆಡಿ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ಎಸ್ಪಿ ಯಶೋದಾ ವಂಟಿಗೋಡಿ, ಡಿಎಫ್‌ಒ ಕಾವ್ಯ ಚತುರ್ವೇದಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ್, ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೇದಾರ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ನಿಂಗಪ್ಪ ಮಸಳಿ, ಲಕ್ಷ್ಮೀದೇವಿ, ದುಂಡಪ್ಪ ತುರಾದಿ, ಸಂತೋಷ ಬಿರಾದಾರ್, ಚಂದ್ರಶೇಖರ ಕಂದಕೂರ, ಪಿಡಿಒ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಮುನಾಯ್ಕ್, ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರು ಸೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.