ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಮಹಿಳಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳನ್ನು ರಚಿಸಿ ಅವುಗಳನ್ನು ಕ್ರಮಬದ್ಧವಾಗಿ ನಡೆಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಬೇಬಿಮಠದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.ತಾಲೂಕಿನ ಗಂಜಿಗೆರೆ ಗ್ರಾಮದ ನೇತಾಜಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಸೋಮನಹಳ್ಳಿ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಗವಂತನ ಬಗ್ಗೆ ಉತ್ತಮ ಸಂದೇಶ ನೀಡುತ್ತವೆ. ಧಾರ್ಮಿಕ ಚಿಂತನೆಗಳ ಪಾಲನೆಯಿಂದಾಗಿ ಸಮಾಜದಲ್ಲಿ ಶಾಂತಿ, ಶಿಸ್ತುಬದ್ಧ ಜೀವನ, ಸಾಮರಸ್ಯ, ಸಹೋದರತ್ವ ಭಾವನೆ, ಸಹಬಾಳ್ವೆಯಂಥಹ ಗುಣಗಳು ಬೆಳೆಯುತ್ತವೆ ಎಂದರು.ಸಾಮಾಜಿಕ ಕಳಕಳಿಯನ್ನು ಹೊಂದಿರುವ ವೀರೇಂದ್ರ ಹೆಗ್ಗಡೆಯವರ ಚಿಂತನೆಗಳಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಬದುಕು ಹಸನಾಗುತ್ತಿದೆ. ಕೆರೆ ಅಭಿವೃದ್ಧಿ, ದೇಗುಲಗಳ ನಿರ್ಮಾಣ, ಹಾಲಿನ ಡೇರಿ ನಿರ್ಮಾಣಕ್ಕೆ ಧನಸಹಾಯ ಸೇರಿದಂತೆ ವಿವಿಧ ರೀತಿಯ ಸಮಾಜಮುಖಿ ಕೆಲಸ ಮಾಡುತ್ತಿದ್ದು ಅವರ ಒಳ್ಳೆಯ ಕೆಲಸಗಳು ಇತರರಿಗೆ ಮಾದರಿಯಾಗಲಿ ಎಂದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ಇಡೀ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಮದ್ಯವರ್ಜನ ಶಿಬಿರ, ಕೆರೆ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ರಚನಾತ್ಮಕ ಕೆಲಸಗಳನ್ನು ಕೈಗೊಂಡು ಗಾಂಧೀಜಿ ಅವರ ಗ್ರಾಮಸ್ವರಾಜ್ಯದ ಕನಸನ್ನು ನನಸು ಮಾಡುವತ್ತ ಸಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಆರ್ ಟಿಒ ಅಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಅಂ.ಚಿ. ಸಣ್ಣಸ್ವಾಮಿಗೌಡ, ಗ್ರಾಮದ ಮುಖಂಡ ತಗಡಪ್ಪ, ರೈತ ಮುಖಂಡ ರಾಜೇಗೌಡ, ಗ್ರಾಪಂ ಅಧ್ಯಕ್ಷ ಪರಮೇಶ್, ರೇಣುಕಪ್ರಸನ್ನ. ವಕೀಲ ನಂದೀಶ್, ಕುಮಾರಸ್ವಾಮಿ, ಶಶಿಶೇಖರ್, ಜಯಪ್ಪ, ಸೋಮಪ್ಪ, ನಿರಂಜನ್, ಶಿವಯ್ಯ, ಕಾಳೇಗೌಡ, ನಾಗೇಗೌಡ ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಗಳು, ನೂರಾರು ಸಂಖ್ಯೆಯ ಮಹಿಳೆಯರು ಗ್ರಾಮದ ಮುಖಂಡರು ಹಾಜರಿದ್ದರು.