ಕೊಪ್ಪಳ: ನಿಮ್ಮ ಭಾವನೆ ಅರ್ಥವಾಗುತ್ತದೆ. ಕಾರ್ಖಾನೆ ತ್ಯಾಜ್ಯದಿಂದ ಆಗಿರುವ ನೋವು ಅರ್ಥ ಮಾಡಿಕೊಂಡಿದ್ದೇನೆ, ಇಷ್ಟು ದಿನಗಳ ಕಾಲ ಹೇಗೆ ಸಹಿಸಿಕೊಂಡಿದ್ದೀರಿ ಎನ್ನುವುದೇ ನನಗೆ ಅಚ್ಚರಿ. ಅಷ್ಟೇ ಅಲ್ಲ, ಸ್ಪಾಂಜ್ ಐರನ್ ಒಂದೇ ಜಾಗದಲ್ಲಿ ಇಷ್ಟೊಂದು ಬಿಟ್ಟಿದ್ದೇ ತಪ್ಪು. ಈಗಂತೂ ನನಗೆ ಅರ್ಥವಾಗಿದ್ದು, ನಿರ್ಧಾಕ್ಷಿಣ್ಯ ಕ್ರಮ ಶತಃಸಿದ್ಧ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರದ ನಿಯಮದಡಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ನೆಲ, ಜಲ,ವಾಯು ಮಾಲಿನ್ಯ ನಿಯಂತ್ರಣ ಮಾಡುವುದಕ್ಕಾಗಿ ನಮ್ಮ ಮಂಡಳಿ ಸ್ಥಾಪನೆಯಾಗಿದೆ. ಬಾಧಿತ ಜನರ ಸಮಸ್ಯೆ ಬಗೆಹರಿಸಲು ಹಿರೇಬಗನಾಳ್‌ಗೆ ಭೇಟಿ ನೀಡಿರುವೆ. ಈ ಗ್ರಾಮಕ್ಕೆ ಬರುವುದಕ್ಕೆ ಮುಂಚೆ ಇಲ್ಲಿನ ಸಮಸ್ಯೆಗಳ ಕುರಿತು ಮಾಧ್ಯಮ ವರದಿ, ಗ್ರಾಮಸ್ಥರ ದೂರು ಗಮನಿಸಿದ್ದೇನೆ. ಈ ವಿಚಾರವಾಗಿ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿ ಸಹ ನೋಡಿದ್ದೇನೆ. ಈಗಾಗಲೇ ಹಲವಾರು ಸೂಚನೆ ಕಾರ್ಖಾನೆಗಳಿಗೆ ನೀಡಲಾಗಿದ್ದು, ಪರಿಣಾಮಕಾರಿಯಾದ ತ್ವರಿತ ಕ್ರಮ ಕೈಗೊಳ್ಳಬೇಕಿರುವುದು ಅವರ ಜವಾಬ್ದಾರಿಯಾಗಿದೆ. ಈಗ ಅನಿವಾರ್ಯ ಪರಿಸ್ಥಿತಿಗೆ ಕಾರ್ಖಾನೆಗಳೇ ಸಮಸ್ಯೆ ತಂದುಕೊಂಡಿವೆ. ಈ ಭೇಟಿಗೂ ಪೂರ್ವದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಅಧಿಕಾರಿಗಳ ತಂಡವನ್ನು ಇಲ್ಲಿಗೆ ಕಳುಹಿಸಲಾಗಿತ್ತು. ಈ ತಂಡವು ನನಗೆ ವರದಿ ತಲುಪಿಸಲು ಸಿದ್ಧತೆ ಕೈಗೊಂಡಿದೆ. ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾನೂನು ಅಡಿ ಸ್ಥಾಪಿತವಾದ ಉದ್ಯಮ ಶಾಶ್ವತವಾಗಿ ನಿಲ್ಲಿಸಲು ಕಾನೂನು ಅಡ್ಡಿ ಬರುತ್ತದೆ. ಆದರೆ, ಮಾಲಿನ್ಯ ಕಾರ್ಯ ಮುಂದುವರೆಸಿದರೆ, ಶಾಶ್ವತವಾಗಿ ನಿಲ್ಲಿಸಲು ಅವಕಾಶವಿದೆ. ಹಾಗಾಗಿ ಮಾಲಿನ್ಯ ನಿಯಂತ್ರಣಕ್ಕೆ ಅವರಿಗೆ ಅವಕಾಶ ಕೊಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಿಸಿದ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಇದು ಕೊನೆಯ ಅವಕಾಶವಿದ್ದು, ಸಮಸ್ಯೆ ಸರಿಪಡಿಸಲು ಯಾವ ತಾಂತ್ರಿಕ ವಿಚಾರಗಳಿವೆ, ಸಂಬಂಧಿಸಿದ ಕಾರ್ಖಾನೆಗಳು ತಾಂತ್ರಿಕ ವರದಿಯೊಂದಿಗೆ ಮುಚ್ಚಳಿಕೆ ಪತ್ರ ನೀಡಬೇಕು. ತಪ್ಪಿದ್ದಲ್ಲಿ ನಿಯಮಗಳಡಿ ಕಾನೂನು ಕ್ರಮ ಕೈಗೊಳ್ಳಲು ಶತಸಿದ್ಧ. ಬಾಧಿತ ಜನರ ನೋವು, ಸಂಕಷ್ಟ, ಆರೋಗ್ಯ ಮತ್ತು ಎಲ್ಲ ವಿಚಾರಗಳು ನಮ್ಮ ಅರಿವಿನಲ್ಲಿದ್ದು, ಮಂಡಳಿಯು ಜನಸಾಮಾನ್ಯರ ಪರವಾಗಿದೆ ಎಂದು ಹೇಳಿದರು.ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಹಿರೇಬಗನಾಳ ಮತ್ತು ಕಾಸನಕಂಡಿ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳು ಕುಣಿಕೇರಿ ತಾಂಡಾ ಹಾಗೂ ಹಾಲವರ್ತಿ ಸೇರಿದಂತೆ ಮತ್ತಿತರೆ ಗ್ರಾಮಗಳಲ್ಲಿ ವಿವಿಧ ಕಂಪನಿಗಳಿಂದ ಆಗುವಂತಹ ಧೂಳಿನಿಂದ ಮುಕ್ತಿ ಕೊಡಿಸಲು ಎಲ್ಲರೂ ಒಗ್ಗೂಡಿ ಹೋರಾಡೋಣ ಎಂದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲೆಯ ಹಿರೇಬಗನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆಲ, ಜಲ ಮತ್ತು ವಾಯು ಮಾಲಿನ್ಯದ ಪರಿಣಾಮಗಳ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, ಜನರ ಆರೋಗ್ಯ ಮತ್ತು ಕೃಷಿ ಉತ್ಪಾದನೆ ಮೇಲೆ ಪರಿಣಾಮಗಳು ಕಂಡು ಬಂದಿರುತ್ತದೆ. ಗ್ರಾಮಸ್ಥರು ಹಾಗೂ ಹೋರಾಟಗಾರರು ನೀಡಿದ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದೆ. ಈ ವೇಳೆ ಮಾಲಿನ್ಯದಿಂದ ಜನರು ಮತ್ತು ಜಾನುವಾರುಗಳ ಆರೋಗ್ಯದ ಮೇಲೆ, ಕೃಷಿ ಹಾಗೂ ತೋಟಗಾರಿಕೆ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಮನದಟ್ಟುಗೊಳಿಸಲಾಗಿದೆ ಎಂದರು.
ಹೋರಾಟಗಾರ ಡಾ. ಅಲ್ಲಮಪ್ರಭು ಬಟ್ಟದೂರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೂಳಪ್ಪ ಹುಲಿಗೇರಿ, ಮಂಜುನಾಥ ಗೊಂಡಬಾಳ, ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ, ಜಿಪಂ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆಯ ಇತರೆ ಜನಪ್ರತಿನಿಧಿ, ಕೊಪ್ಪಳ ಜಿಲ್ಲೆಯ ರೈತಪರ ಮತ್ತು ಪರಿಸರ ಹಿತ ರಕ್ಷಣಾ ಹೋರಾಟ ಸಮಿತಿಗಳು ಹಾಗೂ ಹಿರೇಬಗನಾಳ ಗ್ರಾಮಸ್ಥರು, ಮಹಿಳೆಯರು ಉಪಸ್ಥಿತರಿದ್ದರು.