ಅಡಕೆ ಬೆಳೆಗಾರರ ಸಮಾವೇಶ । ಅಡಕೆ ಹಾನಿಕರವಲ್ಲ । ಕಿಸಾನ್ ಸಮೃದ್ಧಿ ಆ್ಯಪ್ ಉದ್ಘಾಟನೆ
ಅಡಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಭರವಸೆ ನೀಡಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಡಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಅಡಕೆ ಸಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನಾವು ಅಧಿಕಾರದಲ್ಲಿರುವುದೇ ಜನರ ಸೇವೆ ಮಾಡಲು ಹೊರತೂ ಸಚಿವರಾಗಿ ಅಧಿಕಾರ ಅನುಭವಿಸಲು ಅಲ್ಲ ಎಂದರು.ಅಡಕೆಗೆ ಧಾರ್ಮಿಕವಾಗಿಯೂ ಬಹಳ ಮಹತ್ವವಿದೆ. ಅಡಕೆ ಪವಿತ್ರ ವಸ್ತು ಎಂಬುದು ನಮ್ಮ ಸಂಸ್ಕೃತಿಯಲ್ಲಿ ರೂಢಿಯಾಗಿ ಬಂದಿದೆ. ಅಡಕೆ ಆಮದಿನಿಂದ ಸಾಂಪ್ರದಾಯಿಕ ಬೆಳೆಗಾರರಿಗೆ ತೊಂದರೆಯಾಗಿದೆ. ಇದನ್ನು ನಿಲ್ಲಿಸುವ ಪ್ರಯತ್ನವಾಗಿ ಶೇ.100 ರಷ್ಟು ಆಮದು ಸುಂಕವನ್ನು ಹೆಚ್ಚಿಸಿದ್ದೇವೆ. ಈಗ ಅಡಕೆ ಬೆಳೆಯ ಪ್ರದೇಶವೂ ವಿಸ್ತಾರವಾಗಿದೆ ಎಂದರು.
ಸಮಾವೇಶದಲ್ಲಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌವ್ಹಾಣ ಅವರು ಕಿಸಾನ್ ಸಮೃದ್ಧಿ ಆ್ಯಪ್ ಉದ್ಘಾಟಿಸಿದರು. ಬೆಳೆಗಾರರ ಸಂಘ ತಂದಿರುವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಬೆಳೆಗಾರ, ಲೇಖಕ ಡಾ.ಜಯಪ್ರಕಾಶ್ ಮಾವಿನಕುಳಿ ಅವರು ಬರೆದಿರುವ ‘ಪಾರಂಪರಿಕ ಅಡಕೆ ಬೆಳೆಗಾರರ ಅನುಸಂಕಟಗಳ ಕಥಾನಕ- ಅಕ್ಕ ನಾನೊಂದ ಕನಸ ಕಂಡೆ’ ಪುಸ್ತಕ ಬಿಡುಗಡೆ ಮಾಡಿದರು.
ಅಡಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾದ ಕಾಂತ್ರಿ ಗೋವಿಂದರಾವ್, ರಂಗನಾಥ ಎಚ್.ಜಿ., ಆರ್.ಎಸ್.ಗಿರಿ, ಎಲ್.ಟಿ.ತಿಮ್ಮಪ್ಪ, ಬಿ.ಆರ್.ಜಯಂತ್, ವಿ.ನಾ.ಕೃಷ್ಣಮೂರ್ತಿ ಹಾಗೂ ಪ್ರಮುಖ ಅಡಿಕೆ ವ್ಯಾಪಾರಿ ಎಂ.ಎನ್.ಹೆಗಡೆಯವರನ್ನು ಸನ್ಮಾನಿಸಲಾಯಿತು.
ಯು.ಎಚ್.ರಾಮಪ್ಪ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಕ್ರೆ ಸಚಿವರಿಗೆ ನೀಡಿದ ಮನವಿ ಪತ್ರ ವಾಚಿಸಿದರು. ಅನಿಲ್ ಒಡೆಯರ್ ವಂದಿಸಿದರು. ಮಾಲತಿ ಸಭಾಹಿತ್ ಮತ್ತು ಕೌಶಿಕ್ ಕಾನುಗೋಡು ನಿರೂಪಿಸಿದರು.
ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವಂತೆ, ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ವರದಿಯನ್ನು ಸಂಶೋಧನೆ ಮೂಲಕ ದೃಢಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಅಡಕೆಯ ದುರುಪಯೋಗದ ಬಗ್ಗೆ ಬೆಳೆಗಾರರು ಎಚ್ಚರಿಕೆಯಿಂದ ಇರಬೇಕು.