- ದಾವಣಗೆರೆ ದಕ್ಷಿಣ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿ, ಸೋಲಿಸಲು ಸಂಚು: ಡಿ.ಬಸವರಾಜ ಆರೋಪ
- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ವಿರುದ್ಧ ಕೆಲಸ ಮಾಡಿದ್ದ ಮಾಜಿ ಸಚಿವ ಬಿ.ಝೆಡ್. ಜಮೀರ್ ಅಹಮ್ಮದ್- ಮಹಮ್ಮದ್ ಸಿರಾಜ್ ಆಡಿಯೋ ವೈರಲ್ ಆಗಿದೆ. ಈಗ ಅದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ್ದೆಂದು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದ್ದು, ಯಾವುದೇ ಮುಲಾಜಿಗೂ ಒಳಗಾಗದೇ ಜಮೀರ್ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಎಐಸಿಸಿ ಮತ್ತು ಕೆಪಿಸಿಸಿ ವರಿಷ್ಠರಿಗೆ ಒತ್ತಾಯಿಸಿದ್ದಾರೆ.
ಮಡಿಕೇರಿಯಿಂದ ಬರಲು ಬಸ್ಸಿನ ಖರ್ಚಿಗೂ ದುಡ್ಡಿಲ್ಲವೆಂದು ಹೇಳಿಕೊಂಡ ಎಸ್‌ಡಿಪಿಐ ಅಭ್ಯರ್ಥಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸ್ಪರ್ಧಿಸಿ, ಮನೆ ಮನೆಗೆ ಹಣ ಹಂಚಿದ್ದಾರೆ. ಇಲ್ಲಿಗೆ ಬರಲು ಸಹ ಹಣ ಇಲ್ಲದ ವ್ಯಕ್ತಿಗೆ ಮನೆ ಮನೆಗೆ ₹2 ಸಾವಿರ ಹಂಚಿದ್ದು ಹೇಗೆ? ಈ ಕೋಟ್ಯಂತರ ರು. ಹಣದ ಮೂಲ ಯಾವುದು? ಎಸ್‌ಡಿಪಿಐ ಅಭ್ಯರ್ಥಿ ಹಣ ಹಂಚಿದ ಬಗ್ಗೆ ನಮ್ಮ ಕಾರ್ಯಕರ್ತರೇ ನಮಗೆ ಹೇಳಿದ್ದಾರೆ. ನಮಗೆ ಹೆತ್ತ ತಾಯಿಯೂ ಒಂದೇ, ಕಾಂಗ್ರೆಸ್ ಪಕ್ಷವೂ ಒಂದೇ. ಇಂತಹ ಪಕ್ಷಕ್ಕೆ ದ್ರೋಹ ಬಗೆದ ವ್ಯಕ್ತಿ ಯಾರು? ಇಂದು ಕಳ್ಳತನ ಮಾಡಿದ ಹಲವರು ವೈರಲ್ ಆದ ಆಡಿಯೋ ಎಐ ಸೃಷ್ಟಿ ಎನ್ನುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಅವರು ಹೇಳಿದರು.
ಮಾಜಿ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಇಲ್ಲಿ ಬಂದು ಚುನಾವಣೆ ಮಾಡಿದ್ದಾರೆ. ಮುಸ್ಲಿಂ ಜಾತಿವಾದಿ ಪಕ್ಷಗಳು ಮುಸ್ಲಿಂ ಗೆಲ್ಲಿಸುವ ಕೆಲಸ ಮಾಡುತ್ತಾರೋ, ಸೋಲಿಸುವ ಕೆಲಸವನ್ನು ಮಾಡುತ್ತಾರೋ? ಅಸಾದುದ್ದೀನ್ ಓವೈಸಿ ಮನೆ ಮೇಲೆ ಇಡಿ, ಐಟಿ ದಾಳಿ ಆಗಿದೆಯಾ? ಬಿಜೆಪಿ ಅಭ್ಯರ್ಥಿ ನಮ್ಮ ಕಾಲಿಗೆ ಬಿದ್ದ ಅಂತಾ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಾವು ಖರ್ಚು ಕೊಡುತ್ತೇವೆ, ಒಂದು ಜಾಗವನ್ನು ಹೇಳುತ್ತೇವೆ. ಅಲ್ಲಿಗೆ ಬಂದು ಪ್ರಮಾಣ ಮಾಡಲಿ. ಹಿಂದೂಗಳಿಗೆ ಧರ್ಮಸ್ಥಳ ಹೇಗೆ ಪವಿತ್ರ ಸ್ಥಳವೋ ನಮಗೂ ಪವಿತ್ರ ಸ್ಥಳ ಇದೆ. ಜಮೀರ್ ಅಹಮ್ಮದ್ ಸೇರಿ ಉಳಿದವರು ಬರುತ್ತಾರೆಂದರೆ ನಾವು ಹೇಳಿದ ಜಾಗಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರಾದ ಆರ್.ಎಚ್. ನಾಗಭೂಷಣ, ಎ.ಬಿ.ರಹೀಂ ಸಾಬ್, ಜಾಕೀರ್ ಅಲಿ, ಸುರೇಶ ಇತರರು ಇದ್ದರು.
(ಕೋಟ್ಸ್) ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿ, ಜವಾಬ್ದಾರಿಯುತ ಸಚಿವನಾಗಿ ಜಮೀರ್ ಅಹಮ್ಮದ್ ಖಾನ್ ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಸೋಲಿಗೆ ಸಂಚು ರೂಪಿಸಿದ್ದು ಜಗಜ್ಜಾಹೀರಾಗಿದೆ. ಇದು ತಳಮಟ್ಟದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಲ್ಲಿ ತೀವ್ರ ನಿರಾಸೆ, ಆಕ್ರೋಶ ತಂದಿದೆ. ವೈರಲ್ ಆಡಿಯೋದಲ್ಲಿ ಕಾಂಗ್ರೆಸ್ ಸಿದ್ಧಾಂತಕ್ಕೆ ದ್ರೋಹ ಬಗೆದು, ನಮ್ಮ ಅಧಿಕೃತ ಅಭ್ಯರ್ಥಿಯ ಕುಕ್ಕರ್ ಗುರುತಿನ ಪಕ್ಷೇತರ ಅಥವಾ ಇತರೆ ಸಂಘಟನೆಗಳಿಗೆ ಮತ ಚಲಾಯಿಸುವಂತೆ ಅಲ್ಪಸಂಖ್ಯಾತ ಸಮುದಾಯವನ್ನು ಜಮೀರ್ ಅಹಮ್ಮದ್ ಪ್ರಚೋದಿಸಿದ್ದಾರೆ.
- - - ಎಸ್‌ಡಿಪಿಐ ಪಕ್ಷವು ಮುಸ್ಲಿಂ ನಾಯಕತ್ವವನ್ನೇ ಕೊಲೆ ಮಾಡಿ, ಬಿಜೆಪಿಗೆ ಸಹಕಾರ ಮಾಡಿ ಕೊಡುತ್ತದೆ. ಈ ಹಿಂದೆಲ್ಲಾ ನಾವು ಹೆಚ್ಚು ಸೀಟುಗಳನ್ನು ಗೆಲ್ಲುತ್ತಿದ್ದೆವು. ಆದರೆ, ಎಸ್‌ಡಿಪಿಐ ರಾಜಕೀಯಕ್ಕೆ ಬಂದ ಮೇಲೆ ನಾವು ಕಡಿಮೆ ಸೀಟು ಗೆಲ್ಲುವಂತಾಗಿದೆ. ಕಾರಣ ಜಾತ್ಯತೀತ ಮುಸ್ಲಿಂ ನಾಯಕತ್ವದಲ್ಲಿದ್ದ ಮುಖಂಡರ ಬದಲಿಗೆ ಕೋಮುವಾದಿ ಮನೋಭಾವದ ಮುಖಂಡರನ್ನು ಕಣಕ್ಕಿಳಿಸಿ, ಸಮುದಾಯವನ್ನು ಗೊಂದಲಕ್ಕೊಳಗಾಗಿಸಿ, ಮುಸ್ಲಿಮರ ಓಟು ತಪ್ಪಿಸುವ ಮೂಲಕ, ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿ, ಬಿಜೆಪಿಗೆ ಸಹಕಾರ ಮಾಡಿಕೊಡುತ್ತಿದ್ದಾರೆ.
- - -
-2ಕೆಡಿವಿಜಿ1: ದಾವಣಗೆರೆಯಲ್ಲಿ ಮಂಗಳವಾರ ಕೆಪಿಸಿಸಿ ಮುಖಂಡ ಡಿ.ಬಸವರಾಜ, ಮಾಜಿ ಮೇಯರ್ ಕೆ.ಚಮನ್ ಸಾಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.