ಜನರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಶಾಸಕ ಎನ್.ಟಿ.ಶ್ರೀನಿವಾಸ ಎಚ್ಚರಿಕೆ

KannadaprabhaNewsNetwork |  
Published : Jul 22, 2026, 02:30 AM IST
ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದ ನಮ್ಮ ಶಾಸಕರು, ಮನೆ ಬಾಗಿಲಿಗೆ ಸರಕಾರ ಕಾರ್ಯಕ್ರಮದಲ್ಲಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಜನತೆಗೆ ಮನೆ ಹಕ್ಕು ಪತ್ರ ವಿತರಿಸಿದರು.  | Kannada Prabha

ಸಾರಾಂಶ

ಸಾಮಾನ್ಯ ಜನರಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿ ಕೆಲಸ ಮಾಡಿಕೊಡಬೇಕು. ಇಲ್ಲವಾದಲ್ಲಿ ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ ಎಚ್ಚರಿಕೆ ನೀಡಿದರು.

ಕೊಟ್ಟೂರು: ಅಧಿಕಾರವಿದೆ ಎಂಬ ಹಮ್ಮಿನಿಂದ ದರ್ಪ ತೋರದೆ, ಸಮಸ್ಯೆ ಹೇಳಿಕೊಂಡ ಬಂದ ಕ್ಷೇತ್ರದ ಸಾಮಾನ್ಯ ಜನರಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿ ಕೆಲಸ ಮಾಡಿಕೊಡಬೇಕು. ಇಲ್ಲವಾದಲ್ಲಿ ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ ಎಚ್ಚರಿಕೆ ನೀಡಿದರು.

ಕೊಟ್ಟೂರು ತಾಲೂಕಿನ ಕೂಡ್ಲಿಗಿ ಕ್ಷೇತ್ರ ವ್ಯಾಪ್ತಿಯ ಕಾಳಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ನಮ್ಮ ಶಾಸಕರು, ಮನೆ ಬಾಗಿಲಿಗೆ ಸರಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಪ್ರಜೆಗೆ ತನ್ನದೇ ಆದ ಸಮಸ್ಯೆಗಳಿದ್ದೇ ಇರುತ್ತವೆ. ಅಂತಹ ಜನರನ್ನು ಅಲೆದಾಡಿಸದೇ ಕೆಲಸ ಮಾಡಿಕೊಡೋಣ. ಪಕ್ಷದ ಕಾರ್ಯಕರ್ತರೂ ರಾಜ್ಯದಲ್ಲಿ ಅಧಿಕಾರ ಇದೆ ಎಂಬ ಎಂಬ ಹಮ್ಮು ಇಲ್ಲದೇ ಜನತೆಯ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಬೇಕು.

ಮಳೆ ಇಲ್ಲದೆ ಬಿತ್ತನೆಯಾಗದೆ, ಬಿತ್ತನೆಯಾದ ಬೆಳೆ ಬಾಡುತ್ತಿರುವ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಕೂಡಲೇ ನಮ್ಮ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಮುಖೇನ ಮನವಿ ಮಾಡಿರುವೆ. ತಾಲೂಕಿನಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ನೀರು ಕೊರತೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕೂಡ್ಲಿಗಿ ತಾಲೂಕಿನಲ್ಲಿ ೧೦೪ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ೮ ಸಾವಿರಕ್ಕೂ ಹೆಚ್ಚು ಜನರಿಗೆ ಮನೆ ಹಕ್ಕು ಪತ್ರ ನೀಡಲಾಗಿದೆ. ಹೆಚ್ಚು ಗಾಳಿ ಬೀಸುವ ಪ್ರದೇಶವಾಗಿರುವುದರಿಂದ ಪದೇ ಪದೇ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿದೆ. ಶಿವಪುರ, ನರಸಿಂಹಗಿರಿ, ತಿಮ್ಮಲಾಪುರದಲ್ಲಿ ಉಪ ಕೇಂದ್ರಗಳಾದಲ್ಲಿ ವಿದ್ಯುತ್ ಸಮಸ್ಯೆ ಬಗೆ ಹರಿಯಲಿದೆ. ಕಾಳಾಪುರ ಗ್ರಾಮದ ಜನರ ಬೇಡಿಕೆಯಂತೆ ಗ್ರಾಮದಲ್ಲಿ ಕಾರ್ಯಾರಂಭವಾಗಿರುವ ವಿಎಸ್‌ಎಸ್‌ಎನ್ ಮೂಲಕ ಪಡಿತರ ವಿತರಣೆಗಾಗಿ ನ್ಯಾಯಬೆಲೆ ಅಂಗಡಿ ಮಂಜೂರಾತಿ ಮಾಡಿಸಲಾಗುವುದು ಎಂದರು.

ಜೆಸ್ಕಾಂ ಎಂಡಿ ಶಶಿಧರ ಕುರೇರ ಮಾತನಾಡಿ, ಈ ಭಾಗದ ವಿದ್ಯುತ್ ಸಮಸ್ಯೆಗಳ ಕುರಿತು ಶಾಸಕರು ಪದೇ ಪದೇ ತಿಳಿಸಿದ್ದಾರೆ. ಖುದ್ದು ಕಂಡು ಮಾತನಾಡಲು ಬಂದಿರುವೆ. ಜೋತು ಬಿದ್ದ ತಂತಿ, ಕಂಬಗಳ ಬದಲಾವಣೆಗೆ ಕ್ರಮ ವಹಿಸಲಾಗುವುದು. ಟಿಸಿಗಳ ರಿಪೇರಿಗಾಗಿ ಮತ್ತೊಂದು ಕೇಂದ್ರ ಮಂಜೂರು ಮಾಡಲಾಗುವುದು ಎಂದರು.

ಗ್ರಾಪಂ ಉಪಾಧ್ಯಕ್ಷ ಮಂಜುನಾಥ, ಮುಖಂಡ ಭಂಡಾರಿ ಸಿದ್ದೇಶ, ವಿಎಸ್‌ಎಸ್‌ಎನ್ ಅಧ್ಯಕ್ಷ ಸಿದ್ದೇಶ, ತಾಪಂ ಇಒ ಡಾ. ಬಿ. ಆನಂದಕುಮಾರ ಪ್ರಾಸ್ತಾವಿಕ ಮಾತನಾಡಿದರು.ಗ್ರಾಮದ ಮುಖಂಡ ಸುರೇಶ, ತಹಸೀಲ್ದಾರ್ ಜಿ.ಕೆ. ಅಮರೇಶ, ವಿವಿಧ ಇಲಾಖೆ ಅಧಿಕಾರಿಗಳಾದ ಕೆ.ನಾಗನಗೌಡ, ಮಲ್ಲಿಕಾರ್ಜುನಸ್ವಾಮಿ, ನಿಂಗಪ್ಪ, ಜಗದೀಶ, ಪಿಡಿಒ ಪ್ರಶಾಂತ ಇತರೆ ಮುಖಂಡರು ಇದ್ದರು. ಶರಣಪ್ಪ ನಿರ್ವಹಿಸಿದರು.

ಕಾರ್ಯಕ್ರಮಕ್ಕೂ ಮೊದಲು ಶಾಸಕರು ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು. ಗ್ರಾಮದಿಂದ ಉಜ್ಜಯಿನಿ ವರೆಗಿನ ೨ ಕಿಮೀ ರಸ್ತೆಗೆ ಸಿಸಿ ಕಾಮಗಾರಿಗೆ ಭೂಮಿ ಪೂಜೆ, ಗ್ರಾಮದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಎಸ್‌ಎಸ್‌ಎನ್ ಉದ್ಘಾಟಿಸಿದರು. ಮನೆ ಹಕ್ಕು ಪತ್ರ ವಿತರಣೆ ಮಾಡಿದರು.

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಶಾಂತಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಹೀನಾಯವಾಗಿ ಥಳಿಸಿರುವುದು ಖಂಡನೀಯ. ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಹಾಕುವ ಶ್ರಮ ವ್ಯವಸ್ಥೆಯಿಂದ ವ್ಯರ್ಥವಾಗಿತ್ತು. ಪ್ರಜಾಪ್ರಭುತ್ವದಡಿಯಲ್ಲಿ ಕೇಳಿದಕ್ಕೆ ನ್ಯಾಯ ದೊರಕಿಸುವ ಬದಲು ಲಾಠಿಯಿಂದ ಹಲ್ಲೆ ನಡೆಸಿರುವುದು ತೀವ್ರ ನೋವನ್ನುಂಟು ಮಾಡಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಣಿಗಳಿಂದಲೇ ಸಾಂಕ್ರಾಮಿಕ ರೋಗ
ಧರ್ಮವೇ ಸಮಸ್ತ ದುಃಖದ ಶಮನೌಷಧ: ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀ