ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ ಎರಡನೇ ತ್ರೈಮಾಸಿಕ ಸಭೆ ಹಾಗೂ ನಾಗರಿಕ ನೋಂದಣಿ ಪದ್ಧತಿ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಯಕ್ಕೆ ಸರಿಯಾಗಿ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿ ರೈತರಿಗೆ ಸಮಸ್ಯೆ ಅಥವಾ ನಷ್ಟ ಉಂಟಾದರೆ ಸಂಬಂಧಪಟ್ಟವರಿಂದಲೇ ನಷ್ಟ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಯೋಜಿಸಿದ ಅಧಿಕಾರಿಗಳೇ ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಕಟಾವು ಪ್ರಯೋಗ ನಡೆಸಬೇಕು. ಈ ಹಿಂದೆ ಬೆಳೆ ಕಟಾವು ಪ್ರಯೋಗದಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ಈ ಹಿಂದೆ ಅಕ್ರಮವಾಗಿ ಬೆಳೆ ಪರಿಹಾರ ಧನವನ್ನು ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಪೊಲೀಸ್ ದೂರು ದಾಖಲಾಗಿದೆ. ಪ್ರಕರಣದ ತನಿಖೆಗೆ ಸಮಿತಿ ನೇಮಿಸಲಾಗಿದೆ. ವರದಿ ಆಧರಿಸಿ ಶೀಘ್ರದಲ್ಲೇ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಆಗಲಿದೆ. ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಳೆ ಕಟಾವು ಪ್ರಯೋಗದ ಕುರಿತು ತಮ್ಮ ಹಂತದಲ್ಲಿ ಸಮನ್ವಯ ಸಭೆಯನ್ನು ನಡೆಸಬೇಕು. ಸಭೆ ನಡೆಸದೆ ಲೋಪ ಉಂಟಾದರೆ ಅಂತಹ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು.ಪ್ರಸಕ್ತ ವರ್ಷದ ಕಳೆದ ಜುಲೈ ತಿಂಗಳಿನಿಂದ ಅಕ್ಟೋಬರ್ ವರೆಗೆ ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ 4 ಸಭೆ ನಡೆಸಬೇಕಿತ್ತು, ಆದರೆ ಹೊಸದುರ್ಗ ಮತ್ತು ಮೊಳಕಾಲ್ಮೂರು ತಾಲೂಕಿನಲ್ಲಿ 2 ಸಭೆಗಳನ್ನು ಮಾತ್ರ ನಡೆಸಲಾಗಿದೆ. ಸಭೆ ನಡೆಸಲು ವಿಫಲರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಕಳೆದ ಸಭೆಯಲ್ಲಿ ಈ ಸೂಚನೆ ನೀಡಿದ್ದರೂ, ಹೊಸದುರ್ಗ ತಾಲ್ಲೂಕು ಅಂಕಿ ಸಂಖ್ಯೆ ಸಂಗ್ರಹಣೆ ಇಲಾಖೆ ಅಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.
ಕೃಷಿ ಅಂಕಿ ಅಂಶಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ತಹಶೀಲ್ದಾರ್ ಅವರ ಜಂಟಿ ದೃಢೀಕರಣದ ಪ್ರಸ್ತಾವದ ಮೇರೆಗೆ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಬೆಳೆ ಕ್ಷೇತ್ರ, ವಿಸ್ತೀರ್ಣ, ಮರು ಹೊಂದಾಣಿಕೆ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲೆಯ 1,117 ಹಳ್ಳಿಗಳಲ್ಲಿ 7ನೇ ಸಣ್ಣ ನೀರಾವರಿ ಸಮೀಕ್ಷೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್.ಎನ್ ಸಭೆಯಲ್ಲಿ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಸಹಾಯಕ ಅಂಕಿ-ಸಂಖ್ಯೆ ಸಂಗ್ರಹಣಾಧಿಕಾರಿ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.