ಗೋ ಬ್ಯಾಕ್ ಚಳುವಳಿ ಕಾಂಗ್ರೆಸ್ ಸಂಸ್ಕೃತಿಯಲ್ಲ: ದೇವರಾಜ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಂಗ್ರೆಸ್ ಪಕ್ಷದಲ್ಲಿ ಗೋ ಬ್ಯಾಕ್ ಚಳುವಳಿ ಆರಂಭಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಎಚ್ಚರಿಕೆ ನೀಡಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಬ್ಯಾಕ್ ಚಳುವಳಿ ಕಾಂಗ್ರೆಸ್ ಸಂಸ್ಕೃತಿಯಲ್ಲ. ಅದು ಆರ್‌ಎಸ್‌ಎಸ್ ಸಂಸ್ಕೃತಿ ಎಂದರು. ನಮ್ಮಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಟಿಕೆಟ್ ನೀಡುತ್ತದೋ ಅಂತವರಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಆರಂಭವಾಗಿರುವ ಗೋಬ್ಯಾಕ್ ಚಳವಳಿ ಹಿಂದೆ ಕಾಣದ ಕೈಗಳಿವೆ. ಅವರು ಆರ್‌ಎಸ್‌ಎಸ್ ಮನಸ್ಥಿತಿ ಹೊಂದಿದವರಾಗಿರುತ್ತಾರೆ. ಒಂದು ವೇಳೆ ನಮ್ಮದೇ ಪಕ್ಷದ ಕಾರ್ಯಕರ್ತರಾಗಿದ್ದರೆ ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹೈಕಮಾಂಡ್‌ಗೆ ವಿಷಯ ತಿಳಿಸಿದ್ದೇವೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರ ಕಾಫಿ ಬೆಳೆಗಾರರ ಒತ್ತುವರಿ ಭೂಮಿಯಲ್ಲಿ 10 ಎಕರೆ ಲೀಸ್ ಕೊಡುವುದಾಗಿ ಭರವಸೆ ನೀಡಿದೆ. ಅದರ ಜತೆಗೆ ಬಡವರು, ಕೂಲಿ ಕಾರ್ಮಿಕರು, ದಲಿತ ವರ್ಗ ಮನೆ ಕಟ್ಟಿಕೊಳ್ಳಲು ಅವರಿಗೂ ಭೂಮಿ ನೀಡಿದಲ್ಲಿ ಸಾಮಾಜಿಕ ನ್ಯಾಯ ಸಾಕಾರಗೊಳಿಸಿದಂತಾಗುತ್ತದೆ. ಬಡವರಿಗೆ ಡೀಮ್ಡ್ ಭೂಮಿ ವಿತರಿಸುವ ತೀರ್ಮಾನವನ್ನು ಸರ್ಕಾರ ತೆಗೆದು ಕೊಳ್ಳಬೇಕು ಎಂದು ಮನವಿ ಮಾಡಿದರು.ಮೀಸಲು ಅರಣ್ಯ , ನೆಡುತೋಪುಗಳು ಹಾಗೆ ಇರಲಿ . ಆದರೆ, ಇತ್ತೀಚೆಗೆ ಕಂದಾಯ ಇಲಾಖೆಯಿಂದ ನಿರ್ವಹಣೆಗೆ ಪಡೆದಿರುವ ಡೀಮ್ಡ್ ಭೂಮಿಯನ್ನು ಪುನಃ ಕಂದಾಯ ಇಲಾಖೆಗೆ ಬಿಡುಗಡೆ ಮಾಡಬೇಕು. ಬಿಡುಗಡೆ ಮಾಡದಿದ್ದರೆ ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು. ಈ ಬಗ್ಗೆ ಜಿಲ್ಲೆಯ 5 ಶಾಸಕರು ಸದನದಲ್ಲಿ ಮಾತನಾಡಿ, ಡೀಮ್ಡ್ ಕಳಂಕವನ್ನು ಅಳಿಸಿ ಹಾಕುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಮಹಮದ್, ಹಿರೇಮಗಳೂರು ರಾಮಚಂದ್ರ, ಶಾಂತಕುಮಾರ್ ಇದ್ದರು.
ಪೋಟೋ ಫೈಲ್ ನೇಮ್ 8 ಕೆಸಿಕೆಎಂ 4