ಅನ್ನಭಾಗ್ಯ ಯೋಜನೆಯ ಪ್ರಗತಿ ಪರಿಶೀಲಿಸಿದ ಅಧ್ಯಕ್ಷರು, ಪಡಿತರ ವಿತರಣೆಯಲ್ಲಿ ಯಾವುದೇ ಅಕ್ರಮ ಅಥವಾ ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಯಾವುದೇ ಅರ್ಹ ಫಲಾನುಭವಿಯೂ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು । ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಕೋಲಾರ
ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸಮರ್ಪಕವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪವೆಸಗುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಡಾ.ಪ್ರವೀಣ್ ಪಿ. ಬಾಗೇವಾಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅನ್ನಭಾಗ್ಯ ಯೋಜನೆಯ ಪ್ರಗತಿ ಪರಿಶೀಲಿಸಿದ ಅಧ್ಯಕ್ಷರು, ಪಡಿತರ ವಿತರಣೆಯಲ್ಲಿ ಯಾವುದೇ ಅಕ್ರಮ ಅಥವಾ ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದ ಸುತ್ತೋಲೆಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು, ಮರಣ ಹೊಂದಿದ ಫಲಾನುಭವಿಗಳ ಪಡಿತರ ಚೀಟಿಗಳ ರದ್ಧತಿ ಹಾಗೂ ಹೊಸ ಅರ್ಜಿಗಳ ತ್ವರಿತ ವಿಲೇವಾರಿಗೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದ್ದು (ಶೇ. ೯೬.೪೧ರಷ್ಟು ನೋಂದಣಿ), ತಾಂತ್ರಿಕ ದೋಷ ಹಾಗೂ ಬ್ಯಾಂಕ್ ಖಾತೆಗಳ (ಕೆವೈಸಿ) ಸಮಸ್ಯೆಯಿಂದಾಗಿ ಬಾಕಿ ಉಳಿದಿರುವ ಮತ್ತು ಹಣ ಜಮೆಯಾಗದ ಅರ್ಜಿಗಳನ್ನು ತಕ್ಷಣವೇ ಪರಿಶೀಲಿಸಬೇಕು. ನ್ಯೂನತೆಗಳನ್ನು ಸರಿಪಡಿಸಿ ಶೀಘ್ರವೇ ಪರಿಹಾರ ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹಜ್ಯೋತಿ ಯೋಜನೆಯ ಶೂನ್ಯ ಬಿಲ್ ವಿತರಣೆ ಪ್ರಕ್ರಿಯೆಯಲ್ಲಿರುವ ಗೊಂದಲಗಳನ್ನು ಶೀಘ್ರವೇ ಬಗೆಹರಿಸಬೇಕು ಅಧಿಕಾರಿಗಳಿಗೆ ಸೂಚಿಸಿದ ಅವರು, ಗೃಹಜ್ಯೋತಿಯಲ್ಲಿ ವಿದ್ಯುತ್ ಬಳಕೆದಾರರ ನೋಂದಣಿ ಕಾರ್ಯ ನಡೆಯುತ್ತಿದ್ದು, ಬೆಸ್ಕಾಂ ಸಿಬ್ಬಂದಿ ಮನೆ ಮನೆಗೆ ತರಳಿ ಬಳಕೆದಾರರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅರ್ಜಿಯಲ್ಲಿನ ಮಾಹಿತಿ ಕಡ್ಡಾಯವಾಗಿ ತುಂಬಿ ಇಲಾಖೆಗೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ ಅವರು, ಕೆಎಸ್‌ಆರ್‌ಟಿಸಿ ಡಿಸಿ ಈ ಕುರಿತು ಮಾಹಿತಿ ನೀಡಿ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ. ಸರ್ಕಾರದ ನೂತನ ಯೋಜನೆಯಲ್ಲೊಂದಾದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಕಾರ್ಯ ಸಹ ನಡೆದಿದ್ದು. ಈವರೆಗೆ ೮,೭೦೦ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲಾಗಿದೆ. ಈ ವರ್ಷ ಸುಮಾರು ೨೨.೦೦೦ ವಿದ್ಯಾರ್ಥಿಗಳು ಉಚಿತ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದರು.
ಮುಂಬರುವ ಮುಂಗಾರು ಮಳೆಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಶಿಥಿಲಗೊಂಡಿರುವ ಅಥವಾ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತಕ್ಷಣವೇ ಬದಲಾಯಿಸಿ, ಯಾವುದೇ ವಿದ್ಯುತ್ ವ್ಯತ್ಯಯ ಹಾಗೂ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಇಲಾಖೆಗೆ ಆದೇಶಿಸಲಾಯಿತು.
ಸಭೆಯಲ್ಲಿ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಲಾಯಿತು, ಯಾವ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಅಂತೆಯೇ ಯಾವುದೇ ಅನರ್ಹ ಮತದಾರ ಪಟ್ಟಿಯಲ್ಲಿರಬಾರದು ಎಂಬ ಘೋಷಣೆ ಕೂಗಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ನಮ್ಮನ್ನಗಲಿ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನದ ಉಪಾಧ್ಯಕ್ಷ ಡಾ.ಸೂರಜ್ ಹೆಗಡೆರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನು?ನ ಪ್ರಾಧಿಕಾರದ ಉಪಾಧ್ಯಕ್ಷ ಹಿದಾಯತುಲ್ ಷರೀಪ್, ಎ.ಅಶ್ವಥ್ ರೆಡ್ಡಿ, ನಾಗೇಶ್ವರಿ, ತಾಲೂಕು ಅಧ್ಯಕ್ಷರಾದ ಎ.ವಿ.ಮನೋಹರ್, ರಾಧಾಕೃಷ್ಣ ರೆಡ್ಡಿ, ಎಂ.ಆಂಜಪ್ಪ, ಉಮಾಶಂಕರ್, ಸದಸ್ಯರಾದ ಮಮತಾರೆಡ್ಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಟಿ.ಎಂ.ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಶ್ರೀನಾಥ್, ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು ಶುಭ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಲೀಡ್ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.