ಎಲ್ಲ ಇಲಾಖೆಗಳಿಗೆ ಜನರಿಂದ ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಪೂರಕ ದಾಖಲೆ ಇಲ್ಲದಿದ್ದಲ್ಲಿ ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಿ, ಅಗತ್ಯ ಪೂರಕ ದಾಖಲೆ ಪಡೆದುಕೊಂಡು ಕಡತಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ಕಾರವಾರ
ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯ ಕೋರಿ ಇಲಾಖೆಗಳಿಗೆ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಕಡತಗಳನ್ನು ಅಧಿಕಾರಿಗಳು ನಿಗದತ ಕಾಲಾವಧಿಯೊಳಗೆ ವಿಲೇವಾರಿ ಮಾಡಬೇಕು. ಅನಗತ್ಯವಾಗಿ ಕಡತ ವಿಳಂಬ ಮಾಡಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಎಚ್ಚರಿಸಿದರು.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಲ್ಲ ಇಲಾಖೆಗಳಿಗೆ ಜನರಿಂದ ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಪೂರಕ ದಾಖಲೆ ಇಲ್ಲದಿದ್ದಲ್ಲಿ ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಿ, ಅಗತ್ಯ ಪೂರಕ ದಾಖಲೆ ಪಡೆದುಕೊಂಡು ಕಡತಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಈ ಮೂಲಕ ಎಲ್ಲ ಇಲಾಖೆಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. ದುರುದ್ದೇಶಪೂರಕವಾಗಿ ಕಡತಗಳ ವಿಲೇವಾರಿಗೆ ವಿಳಂಬ ಮಾಡುವ ಅಧಿಕಾರಿಗಳ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ವಿವಿಧ ಇಲಾಖೆಗಳಿಂದ ತಮಗೆ ಸಲ್ಲಿಕೆಯಾಗುವ ಕಡತಗಳನ್ನು ತಮ್ಮ ಹಂತದಲ್ಲಿ ವಿಲೇವಾರಿ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದು, ಸಾರ್ವಜನಿಕ ಉದ್ದೇಶದಿಂದ ಕೂಡಿರುವ, ಅತ್ಯಂತ ತುರ್ತಾಗಿ ವಿಲೇವಾರಿ ಆಗಬೇಕಾದ ಕಡತಗಳಿದ್ದಲ್ಲಿ ಅವುಗಳಿಗೆ ಯಾವುದೇ ಸಂದರ್ಭದಲ್ಲಿಯೂ ವಿಳಂಬಕ್ಕೆ ಆಸ್ಪದ ನೀಡದೇ ಅಧಿಕಾರಿಗಳು ತಮ್ಮನ್ನು ನೇರವಾಗಿ ಸಂಪರ್ಕಿಸಿ ಕಡತಗಳಿಗೆ ಅನುಮೋದನೆ ಪಡೆಯಬೇಕು ಎಂದು ತಿಳಿಸಿದ್ದಾರೆ.
126 ಕಡತ ವಿಲೇವಾರಿಇತ್ತೀಚೆಗೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಖುದ್ದು ಭೇಟಿ ನೀಡಿ ಕಡತಗಳ ವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಿದ್ದ ಡಿಸಿ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಬಾಕಿ ಇದ್ದ ಕಡತ ಪರಿಶೀಲಿಸಿ ಅವುಗಳನ್ನು ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಮಂಡಿಸಲಾದ ಹಿಂದುಳಿದ ವರ್ಗಗಳ ಇಲಾಖೆಯ ಕಡತಗಳ ಪರಿಶೀಲನೆ ನಡೆಸಿ ಸಿಂಧುತ್ವ ಪ್ರಮಾಣ ಪತ್ರದ ಕಡತಗಳು ಸೇರಿದಂತೆ ವಿವಿಧ ಒಟ್ಟೂ 126 ಕಡತಗಳನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ವಿಲೇವಾರಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.