ಹೊಸಪೇಟೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾದ್ಯಂತ 47 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಬಾಲ್ಯ ವಿವಾಹ ಮಾಡಿದರೆ ಕುಟುಂಬಗಳು ಹಾಗೂ ಅಪ್ರಾಪ್ತ ಬಾಲಕಿ ಸಹಿತ ಸಂಕಷ್ಟಕ್ಕೆ ಸಿಲುಕುತ್ತಾರೆ. ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದೆ. ಅಪ್ರಾಪ್ತ ಬಾಲಕಿಯರು ವೈವಾಹಿಕ ಜೀವನ ನಡೆಸಲು ದೈಹಿಕವಾಗಿ ಸಮರ್ಥರಾಗಿರುವುದಿಲ್ಲ. ಇದರೊಂದಿಗೆ ಬಾಲ ಗರ್ಭಿಣಿಯಾದರೆ ಗರ್ಭದಲ್ಲಿನ ಮಗುವಿಗೂ ಸರಿಯಾದ ಆರೈಕೆ ದೊರೆಯುವುದಿಲ್ಲ. ಇದರಿಂದ ಗರ್ಭಪಾತ, ಅವಧಿಗೆ ಮುನ್ನ ಮಗುವಿನ ಜನನ, ಶಿಶು ಮರಣ, ತಾಯಿ ಮರಣ ಸಹ ಸಂಭವಿಸುತ್ತವೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಎಸ್. ಶ್ವೇತಾ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿಗೆ ತಂದು ಹತ್ತು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಬಾಲ್ಯ ವಿವಾಹ ತಡೆ ಕಾನೂನನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಲಾಗಿದೆ. ಬಾಲ್ಯ ವಿವಾಹ ತಡೆಯುವಲ್ಲಿ ಜನಪ್ರತಿನಿಧಿಗಳು ಹಾಗೂ ಸಂಘ, ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದರು.ಸಂಪನ್ಮೂಲ ವ್ಯಕ್ತಿ ಎಚ್.ಸಿ.ರಾಘವೇಂದ್ರ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು.
ಮರಿಯಮ್ಮನಹಳ್ಳಿ ಶ್ರೀಗುರುಪಾದದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಖಾಜಿ ಸೈಯದ್ ಅಜೀಜುಲ್ಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಸುಭದ್ರಾದೇವಿ, ಚೈತನ್ಯ ಗ್ರಾಮೀಣಾಭಿವೃದ್ಧಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಭೀಮರಾಜ ಯು, ಕಾರ್ಯದರ್ಶಿ ಅಶೋಕ ಮತ್ತಿತರರಿದ್ದರು.