ದೀಪಾವಳಿ ನೆಪದಲ್ಲಿ ಇಸ್ಪೀಟು, ಜೂಜಾಟ ನಡೆಸಿದರೆ ಕಠಿಣ ಕ್ರಮ: ಜೆ.ಎಸ್. ನ್ಯಾಮಗೌಡರ್

KannadaprabhaNewsNetwork |  
Published : Nov 08, 2026, 02:30 AM IST
7ಉಳಉ6 | Kannada Prabha

ಸಾರಾಂಶ

ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟು ಹಾಗೂ ಹಣ ಪಣಕ್ಕಿಟ್ಟು ಜೂಜಾಟ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಎಚ್ಚರಿಕೆ ನೀಡಿದರು.

ಗಂಗಾವತಿ: ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟು ಹಾಗೂ ಹಣ ಪಣಕ್ಕಿಟ್ಟು ಜೂಜಾಟ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಎಚ್ಚರಿಕೆ ನೀಡಿದರು.

ನ. 7ರಂದು ''''ಕನ್ನಡಪ್ರಭ''''ದಲ್ಲಿ ''''ಗಂಗಾವತಿಯಲ್ಲಿ ಇಸ್ಪೀಟ್ ಆಟಕ್ಕೆ ಸ್ಥಳ ಹುಡುಕಾಟ'''' ಎಂದು ವಿಶೇಷ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರದ ಎಪಿಎಂಸಿ ಸಭಾಂಣದಲ್ಲಿ ಎಪಿಎಂಸಿ ಗಂಜ್ ಆವರಣದಲ್ಲಿರುವ ದಲಾಲರು ಹಾಗೂ ಖರೀದಿದಾರ ವರ್ತಕರ ಸಭೆ ನಡೆಸಿತು.

ಡಿವೈಎಸ್ಪಿ ನ್ಯಾಮಗೌಡರ್ ಮಾತನಾಡಿ, ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ನೆಪದಲ್ಲಿ ವರ್ತಕರು ಮತ್ತು ವ್ಯಾಪಾರಿಗಳು ತಮ್ಮ ದೈನಂದಿನ ವ್ಯಾಪಾರ ಚಟುವಟಿಕೆ ಬದಿಗಿಟ್ಟು ಇಸ್ಪೀಟು ಹಾಗೂ ಜೂಜಾಟದಲ್ಲಿ ಬಹಿರಂಗವಾಗಿ ತೊಡಗುವುದು ಕಾನೂನುಬಾಹಿರ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಇಂತಹ ಅನಿಷ್ಟ ಸಂಪ್ರದಾಯಕ್ಕೆ ಈ ಬಾರಿ ಇತಿಶ್ರೀ ಹಾಡಬೇಕು ಎಂದು ತಿಳಿಸಿದರು.

ನಗರದ ಯಾವುದೇ ಪ್ರದೇಶದಲ್ಲಿ ಹಣ ಪಣಕ್ಕಿಟ್ಟು ಇಸ್ಪೀಟು ಹಾಗೂ ಜೂಜಾಟ ನಡೆಸುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ದಲಾಲಿ ವರ್ತಕರು ತಮ್ಮ ಮಳಿಗೆಗಳನ್ನು ಇಸ್ಪೀಟು ಆಡಲು ಬಾಡಿಗೆ ನೀಡುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಇಂತಹ ಅನೈತಿಕ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು ಎಂದು ಎಚ್ಚರಿಸಿದರು.

ದೀಪಾವಳಿ ಸಂದರ್ಭದಲ್ಲಿ ಜೂಜಾಟ ವಿರುದ್ಧ ಪೊಲೀಸ್ ಇಲಾಖೆ ನಗರದಾದ್ಯಂತ ಕಟ್ಟುನಿಟ್ಟಿನ ನಿಗಾ ವಹಿಸಲಿದೆ. ಜೂಜಾಟ ನಡೆಸುವವರಷ್ಟೇ ಅಲ್ಲದೆ, ಅದಕ್ಕೆ ಸ್ಥಳಾವಕಾಶ ಒದಗಿಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಳೆದ ಬಾರಿ ಭತ್ತ ಖರೀದಿಯ ನೆಪದಲ್ಲಿ ವ್ಯಾಪಾರಸ್ಥರಿಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿದ ಘಟನೆಗಳನ್ನು ಉಲ್ಲೇಖಿಸಿದ ಅವರು, ಈ ಬಾರಿ ವ್ಯಾಪಾರಸ್ಥರು ಎಚ್ಚರಿಕೆಯಿಂದ ವ್ಯಾಪಾರ - ವಹಿವಾಟು ನಡೆಸಬೇಕು. ಮಾರುಕಟ್ಟೆಯ ಸಾಮಾನ್ಯ ವ್ಯವಹಾರಕ್ಕಿಂತ ಹೆಚ್ಚಿನ ದರ ನೀಡುವ ಆಮಿಷಕ್ಕೆ ಒಳಗಾಗದೆ, ಭತ್ತ ಖರೀದಿ ಮತ್ತು ಮಾರಾಟದ ಸಂದರ್ಭದಲ್ಲಿ ಸೂಕ್ತ ಪರಿಶೀಲನೆ ನಡೆಸಿ ವ್ಯವಹರಿಸಬೇಕು ಎಂದು ಕಿವಿಮಾತು ಹೇಳಿದರು.

ನಗರ ಠಾಣೆಯ ಪಿಐ ಪ್ರಕಾಶ್ ಯಾತನೂರು, ಎಪಿಎಂಸಿ ಕಾರ್ಯದರ್ಶಿ ಯಮನಪ್ಪ, ವ್ಯಾಪಾರಸ್ಥರಾದ ಮಸ್ಕಿ ಸಿದ್ದಣ್ಣ, ಸಿಂಗನಾಳ ಸುರೇಶ್, ಮಾಂತಗೊಂಡ ಸರ್ವೇಶ್, ಗಾಳಿ ಶಿವಪ್ಪ, ಸಿಂಗನಾಳ ವೆಂಕಟೇಶ್, ಗಲಗಲಿ ಮಾಂತೇಶ್, ಹನುಮೇಶ್ ಶೆಟ್ಟಿ, ಜಂಬಣ್ಣ ಆಚಾರ್ ನರಸಾಪುರ, ರಮೇಶ್, ಲಿಂಗನಗೌಡ, ಮಂಜುನಾಥ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ