ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟು ನಿಟ್ಟಾಗಿ ಪರಿಶೀಲಿಸಿ

KannadaprabhaNewsNetwork | Published : Mar 29, 2024 1:03 AM

ಸಾರಾಂಶ

ಸಿಂದಗಿ ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ನಿಮಿತ್ತವಾಗಿ ತಾಲೂಕಿನ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಗುರುವಾರ ಸಂಜೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಈ ಭಾಗದಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಕಟ್ಟು ನಿಟ್ಟಾಗಿ ಪರಿಶೀಲನೆ ಮಾಡಬೇಕು. ಜಾಗೃಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಂದಗಿ ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ನಿಮಿತ್ತವಾಗಿ ತಾಲೂಕಿನ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಗುರುವಾರ ಸಂಜೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಮಾತನಾಡಿದ ಅವರು, ದೇವಣಗಾವ್ ಮತ್ತು ಮೋರಟಗಿ ಚೆಕ್‌ಪೋಸ್ಟ್‌ಗಳು ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟ ಕಡೆಯ ಚೆಕ್‌ಪೋಸ್ಟ್‌ಗಲಾಗಿದ್ದು, ಸಿಬ್ಬಂದಿ ಕಟ್ಟೆಚ್ಚರ ವಹಿಸಿ ವಾಹನಗಳನ್ನು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರದು.ಚುನಾವಣೆ ಸನಿಹವಿದ್ದಾಗ ದಾಖಲೆ ರಹಿತ ಹಣ, ಮದ್ಯ ಮತ್ತಿತರ ವಸ್ತುಗಳ ಸಾಗಣೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಚಾಲಕರು ನೆಪ ಹೇಳಿ ಅಥವಾ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹೇಳಿ ಪಾರಾಗಲು ಯತ್ನಿಸುತ್ತಾರೆ. ರಾತ್ರಿ ವೇಳೆ ಸಿಬ್ಬಂದಿ ಎಚ್ಚರಿಕೆಯಿಂದ ಇರಬೇಕು. ಪ್ರತಿ ವಾಹನದ ನಂಬರ್ ಪ್ಲೇಟ್ ಪರಿಶೀಲಿಸಿ, ವಾಹನ ಎಲ್ಲಿಂದ ಬಂತು ಎಲ್ಲಿಗೆ ಹೊರಟಿದೆ ಎಂಬುವುದನ್ನು ಕಡ್ಡಾಯವಾಗಿ ಬರೆದುಕೊಳ್ಳಬೇಕು ಎಂದರು. ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ದಾಖಲೆ ಇಲ್ಲದೇ ಯಾವುದೇ ಬೆಲೆ ಬಾಳುವ ವಸ್ತುಗಳು ದೊರೆತರೆ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಭದ್ರತಾ ಕೊಠಡಿಗಳಿಗೆ ಭೇಟಿ:

ಸಿಂದಗಿ ನಗರದ ಆರ್.ಡಿ.ಪಾಟೀಲ ಕಾಲೇಜಿನಲ್ಲಿ ಇರಿಸಲಾದ ಭದ್ರತಾ ಕೊಠಡಿಗಳಿಗೆ ಭೇಟಿ ನೀಡಿ ಇವಿಎಂ ಭದ್ರತೆಯನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಬಳಿಕ ದೇವಣಗಾವ್ ಮತ್ತು ಮೋರಟಗಿ ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಲಾದ ಸಿಸಿ ಟಿವಿ, ಕ್ಯಾಮೆರಾಗಳ ಕಾರ್ಯವೈಖರಿ ಹಾಗೂ ಸಿಬ್ಬಂದಿ ಮೂಲಭೂತ ಸೌಕರ್ಯ ಪರಿಶೀಲಿಸಿದರು. ಈ ವೇಳೆ ಎಸ್ಪಿ ಋಷಿಕೇಶ್ ಸೋನಾವಣೆ, ಡಿವೈಎಸ್ಪಿ ಎಚ್.ಜಗದೀಶ, ಚುನಾವಣೆ ಅಧಿಕಾರಿ ವಿನಾಯಕುಮಾರ ಪಾಟೀಲ, ಸಿಂದಗಿ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ಆಲಮೇಲ ತಹಸೀಲ್ದಾರ್ ಮಹಾದೇವ ಸಣಮುರಿ, ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ, ಕಂದಾಯ ನಿರೀಕ್ಷಕ ಐ.ಎ.ಮಕಾನದಾರ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಸಾಳುಂಕೆ, ಪಿಡಿಒ ಸೈಫನಸಾಬ ಸಿಂದಗಿ, ವಿಶ್ವನಾಥ ವಾಲೀಕಾರ, ದವಲತ್ರಾಯ ರಮಗಾ, ಇಒ ಸುಬ್ರಮಣ್ಯ ಶರ್ಮ, ಮಾಂತಯ್ಯ ಮಠ, ಶಶಿಧರ ಅವಟಿ, ಭೀಮರಾಯ ಚೌಧರಿ ಪೊಲೀಸ್ ಸಿಬ್ಬಂದಿ ನಿಂಗಣ್ಣ ಪೂಜಾರಿ, ಭೀಮು ಲಮಾಣಿ ಸೇರಿದಂತೆ ಇತರರು ಇದ್ದರು.

Share this article