ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಚಿಕ್ಕೊಡಿ ಲೋಕಸಭಾ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಚಿಕ್ಕೊಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,41,758 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಮಾ.16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತದಲ್ಲಿ ಚುನಾವಣೆಯನ್ನು ಜರುಗಿಸಲು ಆಯೋಗವು ನಿರ್ಧರಿಸಿದ್ದು, 01-ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಚಿಕ್ಕೊಡಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏ.12ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಸಲು ಏ.19 ಕೊನೆಯ ದಿನವಾಗಿದ್ದು, ಏ.20ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಏ.22 ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ಹಾಗೂ ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದರು.ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ 17,41,758 ಮತದಾರರ ಪೈಕಿ 8,75,953 ಪುರುಷ ಮತದಾರರು, 8,65,731 ಮಹಿಳಾ ಮತದಾರರು, 74 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿರುತ್ತಾರೆ. ಮಾ.16ರವರೆಗಿನ ಅಂಕಿ ಅಂಶಗಳ ಪ್ರಕಾರ 50,589 ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಿಳಿಸಿದರು.
ಚಿಕ್ಕೊಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 32 ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದ್ದು, ಈ ಪೈಕಿ 18 ರಾಜ್ಯದ ಗಡಿ ಭಾಗದಲ್ಲಿ, ಜಿಲ್ಲೆಯ ಗಡಿಯಲ್ಲಿ 2 ಹಾಗೂ 12 ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣಾ ಆಯೊಗದಿಂದ C-vigil App ಅನ್ನು ಪರಿಚಯಿಸಿದ್ದು, ಸಾರ್ವಜನಿಕರು ಅನಾಮಧೇಯವಾಗಿ ಅಥವಾ ತಮ್ಮ ವಿವರಗಳನ್ನು ಸಲ್ಲಿಸುವ ಮೂಲಕ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ದೂರು ಸಲ್ಲಿಸಬಹುದು.
ಚುನಾವಣಾ ಸಹಾಯವಾಣಿ ಕೇಂದ್ರಗಳು:
ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾಣೆಗಳನ್ನು ಜರುಗಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ತಿಳಿಸಿದರು.
ವಾಹನಗಳ ಕಟ್ಟುನಿಟ್ಟಿನ ತಪಾಷಣೆ
ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಚುನಾವಣೆ ಆಯೋಗ ಲೋಕಸಭೆ ಕ್ಷೇತ್ರದ ಆಯಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗಡಿ ಚೆಕ್ ಪೋಸ್ಟಗಳನ್ನು ಸ್ಥಾಪನೆ ಮಾಡಿದೆ. ಚೆಕ್ ಪೋಸ್ಟ್ ಪ್ರವೇಶ ಮಾಡಿ ಬರುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುವ ಕಾರ್ಯ ಆರಂಭಿಸಿದೆ. ಪ್ರತಿ ಚೆಕ್ ಪೋಸ್ಟ್‌ಗಳಲ್ಲಿ 3 ಜನ ಎಸ್‌ಎಸ್‌ಟಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯನ್ನು ಆಯೋಗ ನಿಯೋಜಿಸಿದೆ. ನಿಪ್ಪಾಣಿ ವಿಧಾನಸಭೆ ಮತಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೊಗನ್ನೊಳ್ಳಿ ಚೆಕ್ಪೋಪೋಸ್ಟ್, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ-ಮುರಗೋಡ ರಸ್ತೆ, ಅಪ್ಪಾಚಿವಾಡಿ ಕ್ರಾಸ್, ಮಾಂಗೂರ ಕ್ರಾಸ್ ಹತ್ತಿರ ಚೆಕ್ ಪೋಸ್ಟ್ ಆರಂಭಿಸಿದೆ. ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದಲ್ಲಿ ಚಿಕ್ಕೋಡಿ-ಹಾಲಟ್ಟಿಯ ಬಳಿ ಸಂಕೇಶ್ವರ ರಸ್ತೆ, ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದವಾದ ಯಕ್ಸಂಬಾ ಬಳಿ, ಸದಲಗಾ-ದತ್ತವಾಡ, ಚಿಕ್ಕೋಡಿಯ ಚೆನ್ಯಾನದಡ್ಡಿ, ಅಥಣಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಲೋಕಸಭೆ ಕ್ಷೇತ್ರದ ಕೊನೆ ಹಳ್ಳಿಯಾದ ತೇಲಸಂಗ ಬಳಿ, ಕೊಟ್ಟಲಗಿ-ಗುಡ್ಡಾಪೂರ, ಕೋಹಳ್ಳಿ ಚೆಕ್‌ಪೋಸ್ಟ್ ಆರಂಭಿಸಿದೆ. ಕಾಗವಾಡ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಹಾರಾಷ್ಟ್ರದ ಮಿರಜ ಸಂಪರ್ಕ ಕಲ್ಪಿಸುವ ಕಾಗವಾಡ-ಮಿರಜ ರಸ್ತೆ, ಗಡಿಯ ಕಾಗವಾಡ-ಗಣೇಶವಾಡಿ ಬಳಿ, ಮಂಗಸೂಲಿ-ಅರಗ, ಕೆಂಪವಾಡ-ಸಿದ್ದೇವಾಡಿ, ಮದಭಾವಿ-ಕಾಟವಾ ಮಹಾರಾಷ್ಟ್ರದ ಗಡಿ ಹತ್ತಿರ, ಮಹಾರಾಷ್ಟ್ರದ ಗಡಿಯ ಬಳ್ಳಿಗೇರಿ-ಜತ್ ರೋಡ ಚೆಕ್ ಪೋಸ್ಟ್ ಆರಂಭಿಸಿದೆ. ಕುಡಚಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಚಿ ಮತ್ತು ಹಾರೂಗೇರಿ ಬಳಿ ಚೆಕ್‌ಪೋಸ್ಟ್ ಆರಂಭಿಸಿದೆ. ರಾಯಬಾಗ ವಿಧಾನಸಭೆ ಕ್ಷೇತ್ರದಲ್ಲಿ ಕಂಕಣವಾಡಿ ಮತ್ತು ಕಬ್ಬೂರ ಬಳಿ ಚೆಕ್‌ಪೋಸ್ಟ್ ಆರಂಭಿಸಿದೆ. ಹುಕ್ಕೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಹಿಟ್ನಿ ಕ್ರಾಸ್, ಗಡಿಯ ಬುಗಡೆ ಆಲೂರ, ಬೈರಾಪೂರ, ಸಂಕೇಶ್ವರ ಬಳಿ ನಾಗನೂರ ಬಳಿ ಚೆಕ್‌ಪೋಸ್ಟ್ ಆರಂಭಿಸಿದೆ. ಇನ್ನೂ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ದಡ್ಡಿ ಕ್ರಾಸ್, ಕುರಣಿ ಕ್ರಾಸ್ ಮತ್ತು ಯಮಕನಮರಡಿ ಬಳಿ ಚುನಾವಣೆ ಆಯೋಗ ಚೆಕ್ ಪೋಸ್ಟ್ ಆರಂಭಿಸಿದೆ.