ಚಿತ್ರದುರ್ಗ: ಪಾರದರ್ಶಕ ಹಾಗೂ ನಿಯಮಾನುಸಾರ ಲೋಕಸಭೆ ಚುನಾವಣೆಗಳ ನಡೆಸಬೇಕಾಗಿದ್ದು ಚುನಾವಣಾ ಆಯೋಗದ ನಿರ್ದೇಶನವ ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವೆಚ್ಚ ವೀಕ್ಷಕಿ ಪ್ರಾಜಕ್ತ ಪಿ.ಠಾಕೂರ್ ಸೂಚನೆ ನೀಡಿದರು.
ಖರ್ಚು ವೆಚ್ಚಗಳ ದೈನಂದಿನ ಮಾಹಿತಿ ಪಡೆದು ದಾಖಲು ಮಾಡಬೇಕು. ವೆಚ್ಚಗಳಿಗೆ ಈಗಾಗಲೇ ನಿಗದಿತ ಪಟ್ಟಿಯೊಂದನ್ನು ನೀಡಲಾಗಿದ್ದು, ಅದರ ಅನುಸಾರವೇ ನಮೂದು ಮಾಡಬೇಕು. ಸಭೆ, ಸಮಾರಂಭದ ಮೇಲೆ ತೀವ್ರ ನಿಗಾವಹಿಸಬೇಕು. ರಾಜಕೀಯ ಪಕ್ಷಗಳು ನೀಡುವ ಖರ್ಚನ್ನು ಯಥಾವತ್ತಾಗಿ ದಾಖಲು ಮಾಡುವ ಬದಲಾಗಿ ಪರೀಶೀಲಿಸುವ ಹಾಗೂ ತುಲನೆ ಮಾಡುವ ಕಾರ್ಯ ನಿರ್ವಹಿಸಬೇಕೆಂದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಶಾಂತಿಯುತ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವು ಸಮಿತಿಗಳನ್ನು ರಚಿಸಿ, ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಕ್ರಮ ತಡೆಗೆ ಜಿಲ್ಲೆಯಾದ್ಯಂತ ನಿರಂತರ ಕಣ್ಗಾವಲು ಇರಿಸಲಾಗಿದೆ. ಪೆಟ್ರೋಲ್ ಬಂಕ್, ಬ್ಯಾಂಕ್‌ಗಳಲ್ಲಿನ ಅಸಹಜವಾದ ವಹಿವಾಟು, ಜಿಲ್ಲೆಯ ಗಡಿ ಪ್ರದೇಶಗಳಲ್ಲಿನ ಸರಕು ಸಾಗಾಣಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದರು.ಹೊರಗಿನಿಂದ ಜಿಲ್ಲೆಯ ಗಡಿಯೊಳಗೆ ಬರಬಹುದಾದ ಮಾದಕ ವಸ್ತು, ಮದ್ಯ, ಮೌಲ್ಯಯುತ ಸರಕುಗಳು, ನಗದು ಸೇರಿದಂತೆ ಅಕ್ರಮ ವಹಿವಾಟಿನ ಬಗ್ಗೆ ವಿಶೇಷ ಗಮನಹರಿಸಬೇಕು. ಬ್ಯಾಂಕ್‌ಗಳಲ್ಲಿನ ಅನಿಯಮಿತ ಹಾಗೂ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುವಂತೆ ಸೂಚಿಸಿದ ಅಕ್ರಮಗಳ ನಿಯಂತ್ರಿಸುವಲ್ಲಿ ಹಗಲಿರುಳು ಕಣ್ಗಾವಲು ಇರಬೇಕು. ಅಲ್ಲದೇ ಅಧಿಕಾರಿಗಳು ಎಲ್ಲಾ ವಿಷಯಗಳಲ್ಲಿ ತಾವು ನಿರ್ವಹಿಸಿದ ಕಾರ್ಯ ಹಾಗೂ ಕೈಗೊಂಡ ಕ್ರಮಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಸಕಾಲದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ಸೂಚಿಸಿದರು.
ಎಸ್ಪಿ ಧರ್ಮೇ್ಂದರ್ ಕುಮಾರ್ ಮೀನಾ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ರಕ್ಷಣಾಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲವೆಂದರು.
ಸಭೆಯಲ್ಲಿ ಚುನಾವಣೆಗೆ ನಿಯೋಜಿತ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.