ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರತಿಭಟನೆಕಾರರು ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯದ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, 2023ರ ಡಿ.31ರ ಮೂಲ ವೇತನದ ಶೇಕಡಾ 25ರಷ್ಟು ಹೆಚ್ಚಳ ಮಾಡಿ 2024ರ ಜ.1ರಿಂದ ವೇತನ ಶ್ರೇಣಿ ಸಿದ್ಧಪಡಿಸುವಂತೆ, 2020ರ ಜ.1ರಿಂದ ಆಗಿರುವ ಶೇ.15 ವೇತನ ಹೆಚ್ಚಳದ 38 ತಿಂಗಳ ಬಾಕಿ ತಕ್ಷಣ ಬಿಡುಗಡೆ ಮಾಡುವಂತೆ, 2020ರ ಜ.1ರಿಂದ 2023ರ ಫೆ.28ರ ಅವಧಿ ಮಧ್ಯೆ ನಿವೃತ್ತರಾಗಿರುವ, ಮೃತಪಟ್ಟಿರುವ, ವಜಾಗೊಂಡಿರುವ ಹಾಗೂ ಕಾರಣಾಂತರಗಳಿಂದ ಸೇವೆಯಿಂದ ನಿರ್ಗಮಿಸಿರುವ ಎಲ್ಲ ಸಾರಿಗೆ ನೌಕರರಿಗೆ 2020ರ ಜ.1ರಿಂದ ಜಾರಿ ಮಾಡಿರುವ ವೇತನ ಶ್ರೇಣಿಗಳನ್ನು ಅನ್ವಯಿಸಿ ಎಲ್ಲ ರೀತಿಯ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿ 10 ವರ್ಷಕ್ಕೊಮ್ಮೆ ಆಯ್ಕೆ ಶ್ರೇಣಿ ಬಡ್ತಿ ನೀಡುವಂತೆ, 2023ರ ಆಗಸ್ಟ್ 8ರಂದು ಸಮಿತಿ ವತಿಯಿಂದ ಸಲ್ಲಿಸಿರುವ ಬೇಡಿಕೆಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.ಚಾಲಕರು, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿ ಮತ್ತು ಇತರ ಎಲ್ಲ ನೌಕರರಿಗೆ ನೀಡಲಾಗುತ್ತಿರುವ ಭತ್ಯೆಗಳಲ್ಲಿ ಐದು ಪಟ್ಟು ಹೆಚ್ಚಳ ಮಾಡುವಂತೆ, ಎಲ್ಲ ನೌಕರರಿಗೂ ಪ್ರತಿ ತಿಂಗಳು ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು 2000ರೂ.ಗಳನ್ನು ನೀಡುವುದರ ಜೊತೆಗೆ ಉಚಿತವಾಗಿ ಔಷಧ ವ್ಯವಸ್ಥೆ ಮಾಡುವಂತಂತೆ, ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಸಾರಿಗೆ ನೌಕರರಿಗೆ ಇಎಸ್‍ಐ ಮಾದರಿಯಲ್ಲಿ ಆಡಳಿತ ವರ್ಗದಿಂದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವಂತೆ, ಈ ಸೌಲಭ್ಯ ನಿವೃತ್ತ ನೌಕರರ ಕುಟುಂಬಗಳಿಗೂ ಲಭಿಸಲು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಮುದ್ರಣಾಲಯ ಮತ್ತು ಕಾರ್ಯಾಗಾರಗಳ ತಾಂತ್ರಿಕ ಸಿಬ್ಬಂದಿಗೆ ಪ್ರತಿ 10 ವರ್ಷಕ್ಕೊಮ್ಮೆ ಮುಂಬಡ್ತಿ ನೀಡುವಂತೆ, ಸಾರಿಗೆ ನಿಗಮಗಳ ವಿದ್ಯುತ್ ಚಾಲಿತ ಬಸ್‍ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸುವಂತೆ, ಶಕ್ತಿ ಯೋಜನೆಯಿಂದ ಚಾಲಕರು ಹಾಗೂ ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಅವರು ಆಗ್ರಹಿಸಿದರು.