ಅಕ್ರಮ ಭೂ ಮಂಜೂರಾತಿ ರದ್ದುಪಡಿಸಲು ಮುಷ್ಕರ

KannadaprabhaNewsNetwork |  
Published : Sep 01, 2026, 02:15 AM IST
31ಎಚ್ಎಸ್ಎನ್12 :  | Kannada Prabha

ಸಾರಾಂಶ

ಯಡೇಹಳ್ಳಿ ಗ್ರಾಮದ ಸರ್ವೆ ನಂ.207/2ಸಿ ಜಮೀನಿನ ಮಂಜೂರಾತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಜಿಲ್ಲಾ ಆದಿದ್ರಾವಿಡ ತುಳು ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಿ. ಶಂಕರ್ ಎಚ್ಚರಿಸಿದರು. ಜಮೀನಿನ ಮೇಲೆ ಯಡೇಹಳ್ಳಿ ಗ್ರಾಮಸ್ಥರು ಸ್ವಾಧೀನ ಹೊಂದಿದ್ದು, ನಮೂನೆ–53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಪ್ರಕರಣದ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಬೆಳಗೋಡು ಹೋಬಳಿಯ ಯಡೇಹಳ್ಳಿ ಗ್ರಾಮದ ಸರ್ವೆ ನಂ.207/2ಸಿ ಜಮೀನಿನ ಮಂಜೂರಾತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಜಿಲ್ಲಾ ಆದಿದ್ರಾವಿಡ ತುಳು ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಿ. ಶಂಕರ್ ಎಚ್ಚರಿಸಿದರು.

ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಭೂ ಕಂದಾಯ ಅಧಿನಿಯಮ–1966ರ ಕಲಂ 108(ಎಫ್)ನಲ್ಲಿರುವ ಮಂಜೂರಾತಿ ಅರ್ಹತೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಈ ಕುರಿತು ಗ್ರಾಮಸ್ಥರ ಪರವಾಗಿ ತಹಸೀಲ್ದಾರ್‌ಗೆ ದೂರು ನೀಡಲಾಗಿದ್ದು, ಗ್ರಾಮ ಆಡಳಿತಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಜೂನ್ 9ರಂದು ವರದಿ ಸಲ್ಲಿಸಿದ್ದಾರೆ ಎಂದರು. ವರದಿಯ ಪ್ರಕಾರ, ಮಂಜೂರಿದಾರರಾದ ಇಂದಿರಾ ಬಿ. ಅಮೀನ್ ಯಡೇಹಳ್ಳಿ ಗ್ರಾಮದ ನಿವಾಸಿಯಾಗಿರಲಿಲ್ಲ. ಅವರನ್ನು ಮಹಾರಾಷ್ಟ್ರಕ್ಕೆ ವಿವಾಹ ಮಾಡಿಕೊಡಲಾಗಿದ್ದು, ಅವರ ಹೆಸರಿನಲ್ಲಿ ನಮೂನೆ–53ರ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಅವರ ಸಹಿ ಇಲ್ಲದಿರುವುದಲ್ಲದೆ, 63 ವರ್ಷ ವಯಸ್ಸು ಎಂದು ನಮೂದಿಸಲಾಗಿದೆ. ಆದರೆ 2017ರಲ್ಲಿ ಮಂಜೂರಾತಿ ನೀಡುವ ಸಂದರ್ಭದಲ್ಲಿ ಅವರಿಗೆ 80 ವರ್ಷಕ್ಕೂ ಅಧಿಕ ವಯಸ್ಸಾಗಿತ್ತು ಹಾಗೂ ಜಮೀನನ್ನು ಸ್ವಯಂ ಸಾಗುವಳಿ ಮಾಡುತ್ತಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವರು ಕರ್ನಾಟಕದ ನಿವಾಸಿಯಾಗಿದ್ದರು ಎಂಬುದಕ್ಕೆ ದಾಖಲೆಗಳಿಲ್ಲ ಎಂದು ಶಂಕರ್ ಹೇಳಿದರು.

ಮಂಜೂರಾತಿ 2.10 ಎಕರೆ ಇದ್ದರೂ ಸ್ಥಳ ಪರಿಶೀಲನೆ ವೇಳೆ 4 ಎಕರೆ ವಿಸ್ತೀರ್ಣದ ಅಕ್ರಮ ನಕ್ಷೆ ತಯಾರಿಸಿರುವುದು ಕಂಡುಬಂದಿದೆ. ಇಂದಿರಾ ಬಿ. ಅಮೀನ್ ಅವರ ಮರಣದ ಬಳಿಕ ಆರು ಮಕ್ಕಳ ಪೈಕಿ ನವೀನ್ ಬಿ. ಅಮೀನ್ ಅವರ ಹೆಸರಿಗಷ್ಟೇ ಪೌತಿ ಖಾತೆ ಮಾಡಲಾಗಿದೆ. ಜಮೀನಿನ ಮೇಲೆ ಯಡೇಹಳ್ಳಿ ಗ್ರಾಮಸ್ಥರು ಸ್ವಾಧೀನ ಹೊಂದಿದ್ದು, ನಮೂನೆ–53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಪ್ರಕರಣದ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸರ್ವೆ ನಂ.207/2ಸಿ ಜಮೀನಿನ ಮಂಜೂರಾತಿಯನ್ನು ರದ್ದುಪಡಿಸಿ, ದಾಖಲೆಗಳು ಹಾಗೂ ಜಮೀನಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬೇಡಿಕೆ ಈಡೇರದಿದ್ದರೆ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.

ಸಂದರ್ಭದಲ್ಲಿ ಆಲೂರು ತಾಲೂಕಿನ ಅಧ್ಯಕ್ಷ ಸುಬ್ರಮಣ್ಯ, ಜಿಲ್ಲಾ ಸಂಚಾಲಕ ಸೋಮಶೇಖರ್‌, ಆಲೂರು ತಾಲೂಕಿನ ಸಂಚಾಲಕ ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಯೋಜನೆಗೆ ಸಿಎಂರಿಂದ ಶೀಘ್ರ ಚಾಲನೆ: ಶಾಸಕ ಕೃಷ್ಣಮೂರ್ತಿ
ಕೋನಿಗರಹಳ್ಳಿ ವೇದಾವತಿ ಮೇಲ್ಸೇತುವೆ ಬಿರುಕು