ಬಾಲ್ಯವಿವಾಹ ಮುಕ್ತ ಜಿಲ್ಲೆಗೆ ಶ್ರಮಿಸಿ: ನ್ಯಾ.ಮಹಾವೀರ

KannadaprabhaNewsNetwork |  
Published : Aug 23, 2025, 02:00 AM IST
ಕ್ಯಾಪ್ಷನ22ಕೆಡಿವಿಜಿ40ದಾವಣಗೆರೆಯಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಗಾರ ವನ್ನ ನ್ಯಾಯಾಧೀಶರಾದ ಮಹಾವೀರ ಮ.ಕರೆಣ್ಣವರ್ ಉದ್ಘಾಟಿಸಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಹೇಳಿದ್ದಾರೆ.

- ಜಿಪಂನಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಗಾರ । ಭಿತ್ತಿಪತ್ರ ಬಿಡುಗಡೆಗೊಳಿಸಿ ಪ್ರತಿಜ್ಞಾವಿಧಿ ಬೋಧನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸ್ಪೂರ್ತಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ಒಂದು ದಿನದ ಬಾಲ್ಯವಿವಾಹ ನಿಷೇಧ ಕುರಿತು ಚಿಂತನಾ ಮಂಥನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 6 ತಾಲೂಕು ಹೊಂದಿದ್ದು, ಗ್ರಾಮೀಣ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ 2 ಸಾವಿರ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿದ್ದಾರೆ. ಆದರೆ ಬಾಲ್ಯ ವಿವಾಹ ಪ್ರಕರಣಗಳ ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಯಾವುದೇ ಗ್ರಾಮ ಅಥವಾ ಸ್ಥಳೀಯಮಟ್ಟದ ಅಧಿಕಾರಿಗಳಿಗೆ ವಿವಾಹ ಸಿದ್ಧತೆ, ಪೂರ್ವ ತಯಾರಿ ಕುರಿತು ಮಾಹಿತಿ ಲಭ್ಯವಿಲ್ಲದೇ ಇರುವುದಿಲ್ಲ. ಆದರೂ ಇಂತಹ ಪ್ರಕರಣಗಳು ಇಂದಿಗೂ ದಾಖಲಾಗುತ್ತಿರುವುದು ವಿಷಾದನೀಯ ಎಂದರು.

ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ, ದೈಹಿಕ ದೌರ್ಜನ್ಯ, ಪೋಕ್ಸೋ ಕುರಿತು ಮಾಹಿತಿ ತಿಳಿದುಬಂದಲ್ಲಿ ಸಂಬಂಧಪಟ್ಟ ಇಲಾಖೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಪೊಲೀಸ್ ಸಹಾಯವಾಣಿ 112ಗೆ ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆ ಕುರಿತ ಕಾನೂನಾತ್ಮಕವಾಗಿ ಸಂಕ್ಷಿಪ್ತ ಮಾಹಿತಿ ನೀಡಿ, ಅಧಿಕಾರಿಗಳ ಕೇಳಿದ ಪ್ರಶ್ನೆಗಳಿಗೆ ಹಾಗೂ ಅವರಲ್ಲಿನ ಗೊಂದಲ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಿದರು.

ಹಕ್ಕುಗಳು ಒದಗಿಸಬೇಕು:

ಜಿಲ್ಲಾ ಪಂಚಾಯಿತಿ ಸಿಇಒ ಗಿಟ್ಟೆ ಮಾಧವ ವಿಠಲ ರಾವ್ ಮಾತನಾಡಿ, ಬಾಲ್ಯ ವಿವಾಹದಿಂದ ಮಕ್ಕಳ ಹಕ್ಕುಗಳು ಕಸಿದುಕೊಂಡಂತೆ ಆಗುತ್ತದೆ. ಅವರಿಗೆ ಸರಿಯಾದ ರೀತಿಯಲ್ಲಿ ಹಕ್ಕು ದೊರಕಿಸಿ ಕೊಡಬೇಕಾದರೆ, ಅಧಿಕಾರಿಗಳು ಕಾನೂನಾತ್ಮವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಬಾಲ್ಯವಿವಾಹ ತಡೆದಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಹಕ್ಕುಗಳನ್ನು ಒದಗಿಸಲು ಸಾಧ್ಯ ಎಂದರು.

ಸಂವಿಧಾನಾತ್ಮಕವಾಗಿ ಗಂಡಿಗೆ 21 ವರ್ಷ, ಹೆಣ್ಣುಮಕ್ಕಳಿಗೆ 18 ವರ್ಷಕ್ಕಿಂತ ಮುಂಚೆಯೇ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ. ಇದರಿಂದ ಮಕ್ಕಳು, ಯುವ ಸಮುದಾಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಿಂದ ಕುಂಠಿತವಾಗುವರು. ಇದರಿಂದ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಕೇವಲ ಒಂದು ಇಲಾಖೆಯಿಂದ ಯಶಸ್ಸು ಸಾಧ್ಯವಿಲ್ಲ. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಜೊತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ. ಪ್ರತಿಯೊಬ್ಬ ಮಕ್ಕಳ ಹಕ್ಕುಗಳಿಗೆ ಸಹಕರಿಸಿ ಅವರ ಶ್ರೇಯೋಭವೃದ್ಧಿ ಮತ್ತು ಬಾಲ್ಯ ವಿವಾಹ ಮುಕ್ತವಾಗಿಸಲು ಶ್ರಮಿಸಬೇಕು ಎಂದರು.

ನ್ಯಾ. ಮಹಾವೀರ ಮ ಕರೆಣ್ಣವರ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಸಹಾಯವಾಣಿ ಸಂಖ್ಯೆ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಡಿ.ಶಂಕರಪ್ಪ ಉಪನ್ಯಾಸ ನೀಡಿದರು.

ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಡಿಡಿಪಿ ಕೊಟ್ರೇಶ್, ಸ್ಫೂರ್ತಿ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ ರೂಪ ನಾಯ್ಕ, ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

- - -

(ಕೋಟ್‌)

ಬಾಲ್ಯವಿವಾಹ ನಿರ್ಮೂಲನೆಗೆ ಗ್ರಾಮೀಣ ಮಟ್ಟದಿಂದ ಅನೇಕ ಸಮಿತಿಗಳನ್ನು ಅನುಷ್ಠಾನಗೊಳಿಸಿದೆ. ಆದರೆ, ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಮತ್ತಷ್ಟು ಅರಿವು ಮೂಡಿಸುವ ಕೆಲಸ ಮಾಡಬೇಕು.

- ಮಹಾವೀರ ಮ. ಕರೆಣ್ಣವರ್, ನ್ಯಾಯಾಧೀಶ.

- - -

-22ಕೆಡಿವಿಜಿ40:

ದಾವಣಗೆರೆಯಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಾಗಾರವನ್ನು ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ್ ಉದ್ಘಾಟಿಸಿದರು.

PREV

Recommended Stories

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ
ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಬೊಮ್ಮಾಯಿ