ಭ್ರಷ್ಟಾಚಾರ ಮುಕ್ತ ಜಿಲ್ಲೆಗೆ ಶ್ರಮಿಸಿ: ನ್ಯಾ. ಬಿ.ಎಸ್. ಪಾಟೀಲ

KannadaprabhaNewsNetwork |  
Published : Nov 06, 2026, 02:30 AM IST
ಸಭೆಯನ್ನು ಉದ್ದೇಶಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರಿ ನೌಕರರಿಗೆ ಸರಕಾರವು ಅನೇಕ ಸವಲತ್ತು ನೀಡಿದೆ. ಅದರಲ್ಲಿ ಉತ್ತಮ ಜೀವನ ಸಾಗಿಸಬಹುದಾಗಿದೆ. ಆದರೆ ಕೆಲ ಅಧಿಕಾರಿಗಳು ಅತಿ ಆಸೆಗಾಗಿ ಭ್ರಷ್ಟಾಚಾರದಲ್ಲಿ ತೊಡಗುತ್ತಿರುವ ಕುರಿತು ದೂರಗಳು ಬಂದಿದ್ದು, ಭ್ರಷ್ಟಾಚಾರ ಸಾಬೀತಾದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು.

ಸರ್ಕಾರಿ ಕಚೇರಿಗಳಿಂದ ಶಾಲೆ, ಆಸ್ಪತ್ರೆ, ವಸತಿ ನಿಲಯಗಳವರೆಗೆ ಲೋಪದೋಷಗಳ ಸರಮಾಲೆ, ಅಧಿಕಾರಿಗಳಿಗೆ ಲೋಕಾಯುಕ್ತರ ಚಾಟಿ

ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ, ಲೋಪದೋಷ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ

ಕನ್ನಡಪ್ರಭ ವಾರ್ತೆ ಗದಗ

ಸರ್ಕಾರಿ ನೌಕರರಿಗೆ ಸರಕಾರವು ಅನೇಕ ಸವಲತ್ತು ನೀಡಿದೆ. ಅದರಲ್ಲಿ ಉತ್ತಮ ಜೀವನ ಸಾಗಿಸಬಹುದಾಗಿದೆ. ಆದರೆ ಕೆಲ ಅಧಿಕಾರಿಗಳು ಅತಿ ಆಸೆಗಾಗಿ ಭ್ರಷ್ಟಾಚಾರದಲ್ಲಿ ತೊಡಗುತ್ತಿರುವ ಕುರಿತು ದೂರಗಳು ಬಂದಿದ್ದು, ಭ್ರಷ್ಟಾಚಾರ ಸಾಬೀತಾದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.

ಗುರುವಾರ ಗದಗ ಜಿಪಂ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ಅವರದೇ ಆದಂತಹ ಕಾರ್ಯಗಳನ್ನು ವರ್ಗೀಕರಣ ಮಾಡಿ ಕೊಡಲಾಗಿರುತ್ತದೆ. ಈ ಕಾರ್ಯ ಪರೀಶಿಲನೆಗಾಗಿ ಮೇಲುಸ್ತುವಾರಿಯನ್ನು ನೇಮಿಸಲಾಗಿದ್ದರೂ ಸಹ ಸರಕಾರಿ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ. ಸಾರ್ವಜನಿಕರು ಒಂದೇ ಕೆಲಸಕ್ಕಾಗಿ ಪದೇ ಪದೇ ಕಚೇರಿಗೆ ಆಗಮಿಸುತ್ತಾರೆ ಎಂದರೆ ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ ಎಂದರ್ಥವಾಗುತ್ತದೆ ಎಂದರು.

ನಗರಗಳನ್ನು ಸ್ವಚ್ಛವಾಗಿಡುವುದು ಮುಖ್ಯವಾಗಿದೆ. ಗ್ರಾಮ ಮಟ್ಟದಿಂದ ನಗರ ಪ್ರದೇಶಗಳಲ್ಲಿ ಶೌಚಾಲಯಗಳು ಇಲ್ಲದೇ ಇರುವುದು ಕಂಡು ಬಂದಿದ್ದು, ಶೌಚಾಲಯ ನಿರ್ಮಾಣಕ್ಕೆ ಅನುದಾನ ಪಡೆದರೂ ಸಹ ಶೌಚಾಲಯ ನಿರ್ಮಿಸದೆ ಇರುವ ಕುರಿತು ಪರಿಶೀಲಿಸಿ ಕ್ರಮ‌ ಜರುಗಿಸಲಾಗುವುದು.

ಜಿಲ್ಲೆಯಲ್ಲಿನ ತಹಸೀಲ್ದಾರ ಕಚೇರಿಗಳ ಆವರಣ ಸ್ವಚ್ಛತೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಇರುವುದು, ಅರ್ಜಿ ಸ್ವೀಕರಿಸುವ ಸಂಬಂಧ ರಿಜಿಸ್ಟರ್‌ಗಳು ಇಲ್ಲದೆ ಇರುವುದು ಪರಿಶೀಲನೆಯಲ್ಲಿ ಕಂಡು ಬಂದಿದ್ದು ರೋಣ ತಹಶೀಲ್ದಾರ ಕಚೇರಿಯಲ್ಲಿ 219 ಆಡಿಟ್ ಆಕ್ಷೇಪಣೆಗಳಲ್ಲಿ 20 ಆಕ್ಷೇಪಣೆಗಳಿಗೆ ಮಾತ್ರ ಅನುಪಾಲನಾ ವರದಿ ಸಲ್ಲಿಸಿರುವುದು ಕಂಡು ಬಂದಿರುತ್ತದೆ. ರೋಣ ತಾಲೂಕಿನ 10 ಗ್ರಾಮಗಳಲ್ಲಿ ಸ್ಮಶಾನ ಇಲ್ಲದೆ ಇರುವ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆ ಪಡೆದುಕೊಂಡರು. ತಹಶೀಸೀಲ್ದಾರ ಕಚೇರಿಯಲ್ಲಿ ಗುರುತಿಸಲಾದ ತಪ್ಪುಗಳು ಕುರಿತು ವಿವರಣೆ ನೀಡಬೇಕು ಇಲ್ಲವಾದಲ್ಲಿ ಅಧಿಕಾರಿಗಳು ತೊಂದರೆಗಿಡಾಗುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

ಸರಕಾರವು ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆ ರೂಪಿಸಿ ಅದಕ್ಕೆ ಸಾಕಷ್ಟು ಅನುದಾನ ಒದಗಿಸುತ್ತಿದೆ. ಸರಕಾರದ ಯೋಜನೆ ಹಾಗೂ ಅನುದಾನವನ್ನು ಸಮರ್ಪಕ ಹಾಗೂ ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವುದು ಎಲ್ಲ ಅಧಿಕಾರಿಗಳ ಕರ್ತವ್ಯ. ಒಂದು ವೇಳೆ ಅಧಿಕಾರಿ ಸಿಬ್ಬಂದಿ ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ವಹಿಸಲಾಗುವುದು ಎಂದು ಬಿ.ಎಸ್. ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಲೋಕಾಯುಕ್ತ ಅಪರ ಉಪನಿಬಂಧಕ ಗಂಗಾಧರ್, ಆಪ್ತ ಕಾರ್ಯದರ್ಶಿ ಶ್ರೀನಾಥ ಕೆ., ಧಾರವಾಡ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್ಪಿ ಮಿಥುನ ಎಚ್.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್‌. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.ರೋಣ ತಹಸೀಲ್ದಾರ್ ಕಚೇರಿಯಲ್ಲಿ 219 ಆಡಿಟ್ ಆಕ್ಷೇಪಣೆಗಳಿದ್ದು, ಈ ಪೈಕಿ ಕೇವಲ 20 ಆಕ್ಷೇಪಣೆಗಳಿಗೆ ಮಾತ್ರ ಅನುಪಾಲನಾ ವರದಿ ಸಲ್ಲಿಸಲಾಗಿದೆ. ಅಲ್ಲದೆ, ರೋಣ ತಾಲೂಕಿನ 10 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವ ಕುರಿತು ಅಧಿಕಾರಿಗಳಿಂದ ವಿವರ ಪಡೆಯಲಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ಗುರುತಿಸಲಾದ ಲೋಪದೋಷಗಳ ಕುರಿತು ಸಮರ್ಪಕ ವಿವರಣೆ ನೀಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ತೊಂದರೆ ಎದುರಿಸಬೇಕಾಗುತ್ತದೆ.

ಬಿ.ಎಸ್. ಪಾಟೀಲ ಲೋಕಾಯುಕ್ತ ನ್ಯಾಯಮೂರ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳು ಜಾಗೃತಿವಾದರೆ ಅದೇ ದೊಡ್ಡ ಶಕ್ತಿ
ರಾಮಮಂದಿರ ಪೇಜಾವರ ಶ್ರೀಗಳ ಕನಸಾಗಿತ್ತು