ದಸರಾ ಉತ್ಸವದಲ್ಲಿ ಜಂಬೂ ಸವಾರಿ ಆರಂಭವಾಗುವ ಬನ್ನಿ ಮಂಟಪದ ಬಳಿ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು. ಬನ್ನಿ ಮಂಟಪದ ಬಳಿ ಆನೆಗಳು ನಿಲ್ಲುವ ಸ್ಥಳ ಮತ್ತು ಅಂಬಾರಿ ಕಟ್ಟುವ ಸ್ಥಳದ ಅಲ್ಲಿರುವ ಮರಗಳ ರೆಂಬೆಗಳನ್ನು ತೆರವು ಮಾಡಿಸಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದಲ್ಲಿ ಅ.15ರಿಂದ 18ರವರೆಗೆ 4 ದಿನಗಳ ಕಾಲ ನಡೆಯುವ ದಸರಾವನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ವಿವಿಧ ಸಮಿತಿಗಳ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ದಸರಾ 2026ರ ಪೂರ್ವ ಸಿದ್ಧತೆಗಳಿಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ದಸರಾ ಉದ್ಘಾಟನಾ ಸ್ಥಳವಾದ ಕಿರಂಗೂರು ಬನ್ನಿಮಂಟಪಕ್ಕೆ ಸುಣ್ಣ-ಬಣ್ಣ ಬಳಿಸಿ ಸ್ಥಳೀಯ ಗ್ರಾಪಂ ಪಿಡಿಒ ಹಾಗೂ ಆಡಳಿತಾಧಿಗಳಿಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ದಸರಾ ಉತ್ಸವದಲ್ಲಿ ಜಂಬೂ ಸವಾರಿ ಆರಂಭವಾಗುವ ಬನ್ನಿ ಮಂಟಪದ ಬಳಿ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು. ಬನ್ನಿ ಮಂಟಪದ ಬಳಿ ಆನೆಗಳು ನಿಲ್ಲುವ ಸ್ಥಳ ಮತ್ತು ಅಂಬಾರಿ ಕಟ್ಟುವ ಸ್ಥಳದ ಅಲ್ಲಿರುವ ಮರಗಳ ರೆಂಬೆಗಳನ್ನು ತೆರವು ಮಾಡಿಸಬೇಕು ಎಂದು ಸೂಚಿಸಿದರು.
ವಿದ್ಯುತ್ ತಂತಿಗಳ ಬಗ್ಗೆ ಸೆಸ್ಕ್ ಅಧಿಕಾರಿಗಳು ನಿಗಾ ವಹಿಸಬೇಕು. ಇನ್ನು ಎರಡು ದಿನಗಳಲ್ಲಿ ಬನ್ನಿ ಮಂಟಪದ ಆವರಣದಲ್ಲಿ ಸ್ವಚ್ಛಗೊಳಿಸಿ ಬಣ್ಣ ಬಳಿಸಿ ದಸರಾ ಉತ್ಸವ ಆರಂಭಕ್ಕೂ ಮುನ್ನ ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಎಂದರು.
ಜಂಬೂ ಸವಾರಿ ಸಾಗುವ ಹೆದ್ದಾರಿ ರಸ್ತೆಯ ಎರಡೂ ಕಡೆ ಹಾಗೂ ರಸ್ತೆ ವಿಭಜಕವನ್ನು ಸ್ವಚ್ಛತೆ ಮಾಡಿಸಬೇಕು. ವೇದಿಕೆ ನಿರ್ಮಾಣದಲ್ಲಿ ಯಾವುದೇ ಲೋಪವಿಲ್ಲದಂತೆ ನಿರ್ಮಾಣ ವಾಗಬೇಕು. ವಾಹನಗಳ ನಿಲುಗಡೆಗೆ ಸರಿಯಾದ ಸ್ಥಳವನ್ನು ನಿಗದಿಪಡಿಸುವಂತೆ ತಿಳಿಸಿದರು.
ಕಾರ್ಯಕ್ರಮ ರೂಪುರೇಷೆಗಳನ್ನು ಸಿದ್ಧಪಡಿಸಲು ರಚಿಸಲಾಗುವ ವಿವಿಧ ಸಮಿತಿಗಳು ಯಾವುದೇ ಲೋಪ ಬಾರದಂತೆ ವಹಿಸಿರುವ ಕರ್ತವ್ಯದ ಜವಾಬ್ದಾರಿಯುತವಾಗಿ ನಡೆಸಲು ಸೂಚಿಸಿದರು. ವೇದಿಕೆ ಬಳಿ ವಿವಿಧ ಇಲಾಖೆಗಳಿಂದ ಮಳಿಗೆ ನಿರ್ಮಾಣ ಮಾಡಿ ಸ್ಥಳೀಯ ಉತ್ಪನ್ನಗಳ ಮಾರಾಟ, ಆಹಾರ, ಹಾಗೂ ಪುಸ್ತಕ ಮಳಿಗೆಯನ್ನು ತೆರೆಯಲು ಅವಕಾಶ ನೀಡಿ ಎಂದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಸೂಚಿಸಲಾಯಿತು. ಇದಲ್ಲದೆ ದಸರಾ ಬನ್ನಿಮಂಟಪ ಹಾಗೂ ವೇದಿಕೆ ನಿರ್ಮಾಣದಲ್ಲಿ ಶುಚಿತ್ವದಲ್ಲಿ ರಾಜಿಯಿಲ್ಲದಂತೆ ಕ್ರಮವಹಿಸಲು ಸಭೆಯಲ್ಲಿ ಸೂಚಿಸಿದರು.
ಯುವ ದಸರಾ ಸಂಭ್ರಮದ ಸಿದ್ಧತೆ:
ನಂತರ ಈ ಬಾರಿ ಹೊಸದಾಗಿ ಅ.12 ಹಾಗೂ 13 ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಸಲು ಮುಂದಾಗಿರುವ ಯುವ ದಸರಾ ಸಂಭ್ರಮದ ವೇದಿಕೆ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು.
ದಸರಾ ಸಂಭ್ರಮಕ್ಕೆ ಜಿಲ್ಲೆಯ ಎಲ್ಲಾ ಕಾಲೇಜಿನ ಯುವಕ ಯುವತಿಯರಿಗೆ ಅವಕಾಶ ಕಲ್ಪಿಸಿ ಈಗಿನ ಯುವಕರಿಗೆ ಈ ದಸರಾ ಉತ್ಸವ ಸಂಭ್ರಮವನ್ನು ಆಯೋಜಿಸಲಾಗಿದ್ದು, ಅಧಿಕಾರಿಗಳು ಯಶಸ್ವಿಯಾಗಿ ನಡೆಯುವಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಈಗಾಗಲೇ ದಸರಾ ಯುವ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಸಲು ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಮೈಸೂರಿನಲ್ಲಿ ನಡೆಯುವ ಯುವ ಸಂಭ್ರಮದ ಎರಡು ದಿನದ ಕಾರ್ಯಕ್ರಮವನ್ನು ಈ ಬಾರಿ ಪ್ರತ್ಯೇಕವಾಗಿ ನಡೆಸಲಾಗಿದೆ. ಎಂದರು.
ವೇದಿಕೆಯನ್ನು ವಿಶಾಲವಾಗಿ ನಿರ್ಮಿಸಲು ಸ್ಥಳವನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಸಲಾಗಿದೆ. ಚಿತ್ರ ನಟರು, ಹೆಸರಾಂತ ಗಾಯಕರು, ಸರಿಗಮಪ ಖ್ಯಾತಿಯ ಯುವಜನರು, ನೃತ್ಯಗಾರರನ್ನು ಈ ವೇದಿಕೆಗೆ ಕರೆತಂದು ಯುವಜನರನ್ನು ರಂಜಿಸಲಾಗುವುದು ಎಂದರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ (ಡಿಎಸ್ 2 ಅಭಿವೃದ್ಧಿ) ಲಕ್ಷ್ಮಿ ಪಿ., ಮಂಡ್ಯ ನಗರ ಯೋಜನಾ ನಿರ್ದೆಶಕರಾದ ಚಂದ್ರಶೇಖರ್, ಮುಡಾ ಆಯುಕ್ತ ಕೃಷ್ಣ ಕುಮಾರ್, ಮಂಡ್ಯ ವಿವಿ ಕುಲ ಸಚಿವರಾದ ಕಲ್ಪಶ್ರೀ, ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಪ್ರತೀಕ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಚೇತನಯಾದವ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ವಿ.ನಂದೀಶ್, ತಾಪಂ ಇಒ ಚಂದ್ರು, ಬಿಇಒ ಚಂದ್ರಶೇಖರ್, ಮುಖ್ಯಾಧಿಕಾರಿ ರಾಜಣ್ಣ, ಪಶು ಸಂಗೋಪನ ವೈದ್ಯಾಧಿಕಾರಿ ಡಾ.ಪ್ರವೀಣ್, ಸಿಪಿಪಿಐ ಸಕಲೇಶ್ವರ್, ಸಿಪಿಐ ಬಿ.ಜಿ. ಕುಮಾರ್ ಇತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.