ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹೇಳಿದರು.
ಡಿಸೆಂಬರ್ 21 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ನಗರದ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಕಾರದೊಂದಿಗೆ ಚಾಲನೆ ನೀಡಲಾಗುವುದು. 5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಕರೆ ನೀಡಿದರು.ಜಿಲ್ಲೆಯಾದ್ಯಂತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತದೆ. ಡಿಸೆಂಬರ್ 22 ರಿಂದ ಡಿಸೆಂಬರ್ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾವುದೇ ಮಗು ಲಸಿಕೆಯಿಂದ ಹೊರಗುಳಿಯಬಾರದು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ, ಹೊಲಗಳಲ್ಲಿ ವಾಸಿಸುತ್ತಿರುವ ಮಕ್ಕಳು,ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರ ಮಕ್ಕಳಿಗೂ ಗಮನಹರಿಸಿ ಪೋಲಿಯೋ ಲಸಿಕೆ ನೀಡಬೇಕು ಎಂದರು.ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್ ಮಾತನಾಡಿ, ಜಿಲ್ಲೆಯಲ್ಲಿ 1,16,724 ಐದು ವರ್ಷದೊಳಗಿನ ಮಕ್ಕಳು ಇದ್ದು, ಒಟ್ಟು 723 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. 1446 ತಂಡಗಳನ್ನು ರಚಿಸಲಾಗಿದೆ. ಮೊಬೈಲ್ ತಂಡ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಟ್ರಾನ್ಸಿಟ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. 2,892 ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 147ಮೇಲ್ವಿಚಾರಕರನ್ನು ಗುರುತಿಸಲಾಗಿದೆ. ಇವರುಗಳಿಗೆ ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಿಂದ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ತಾಲೂಕು ಆರೋಗ್ಯ ಅಧಿಕಾರಿ ಡಾ.ಜವರೇಗೌಡ, ಸಿ ಡಿಪಿಒ ಕುಮಾರಸ್ವಾಮಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.