ಸಂಡೂರು:
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಲ್ಲಿ ಕಲಿಕೆಯ ಗುಣಮಟ್ಟ ಉನ್ನತೀಕರಣಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಂ. ಮೇತ್ರಿ ತಿಳಿಸಿದರು.ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, ಅಲ್ಲಿನ ಸ್ಕಂದಗಿರಿ ಸಭಾಂಗಣದಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈಗಿರುವ ಸಂಪನ್ಮೂಲಗಳು ಹಾಗೂ ಪ್ರಸ್ತುತ ಸಮಸ್ಯೆಗಳನ್ನು ತಿಳಿದುಕೊಳ್ಳಲು ಅಧ್ಯಯನ ತಂಡವಾಗಿ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿದ್ದೇವೆ. ನವಂಬರ್ ತಿಂಗಳಲ್ಲಿ ನ್ಯಾಕ್ ಸಮಿತಿಯವರು ವಿಶ್ವವಿದ್ಯಾಲಯದ ಗ್ರೇಡ್ ನಿರ್ಧರಿಸಲು ಆಗಮಿಸುತ್ತಿದ್ದಾರೆ. ಆ ಕಾರಣಕ್ಕಾಗಿ ಅಧ್ಯಾಪಕರ, ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ, ಮೂಲ ಸೌಕರ್ಯಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಾಗಿ ಈ ಕೆಲಸಕ್ಕೆ ಮುಂದಾಗಿದ್ದೇವೆ. ವಿಶ್ವವಿದ್ಯಾಲಯದ ಮುಖ್ಯ ಕೇಂದ್ರದಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ, ಅಲ್ಲಿರುವ ಸಮಸ್ಯೆಗಳು ಇಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿಲ್ಲ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.ಸ್ನಾತಕೋತ್ತರ ಕೇಂದ್ರದಲ್ಲಿನ ಮೆಟಲರ್ಜಿ ಹಾಗೂ ಭೂಗರ್ಭ ಶಾಸ್ತ್ರದ ವಿಭಾಗವು ವಿಶೇಷತೆಯನ್ನು ಹೊಂದಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಕಲಿಕೆಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿನ ಪರಿಸರ ಹಾಗೂ ಮೂಲ ಸೌಕರ್ಯಗಳು ಕಲಿಕೆಗೆ ಪ್ರೇರಕವಾಗಿವೆ. ಐಎಎಸ್, ಕೆಎಎಸ್, ನೆಟ್, ಸೆಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಅಲ್ಪಾವಧಿ ಸ್ಕಿಲ್ ಕೋರ್ಸ್ಗಳನ್ನು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ಹಾಗೂ ಪಿಜಿ ಕೇಂದ್ರಗಳ ವಿಭಾಗಗಳಲ್ಲಿ ಅಳವಡಿಸುವ ಯೋಜನೆ ನಮ್ಮ ಮುಂದಿದೆ. ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕರಾದ ಡಾ. ರವಿ ಬಿ, ವಿಶ್ವವಿದ್ಯಾಲಯದ ಐಕ್ಯೂಎಎಸ್ ನಿರ್ದೇಶಕ ತಿಪ್ಪೇರುದ್ರಪ್ಪ, ಮುಖ್ಯ ಆವರಣದ ವಿವಿಧ ವಿಭಾಗಗಳ ಡೀನ್‌ಗಳಾದ ಪ್ರೊ. ಅನಂತ್ ಎಲ್ ಜಂಡೇಕರ್, ಪ್ರೊ. ಗೌರಿ ಮಾನಸ, ಪ್ರೊ. ಸದ್ಯೋಜಾತಪ್ಪ, ಪ್ರೊ. ರಾಬರ್ಟ್, ಪ್ರೊ. ವೀರೇಂದ್ರ ಪಾಟೀಲ್, ಪ್ರೊ. ದಿನೇಶ್ ಕುಮಾರ್, ಡಾ. ಶರತ್‌ಕುಮಾರ್, ಡಾ. ಮುಬಾರಕ್, ಡಾ. ಮಲ್ಲಯ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.