ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಆರೋಗ್ಯ ಸಂಬಂಧ ಗರ್ಭಿಣಿ ಮತ್ತು ಬಾಣಂತಿಯರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಶಿಶು ಮತ್ತು ತಾಯಿ ಮರಣ ಆಗದಂತೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳ ಸಂಬಂಧ ಮಾಹಿತಿ ಪಡೆದು ಅವರು ಮಾತನಾಡಿದರು.
ಆಸ್ಪತ್ರೆಗೆ ಬರುವ ರೋಗಿಗಳನ್ನು ತಕ್ಷಣವೇ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತಾಗಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು. ಹೊರರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಲ್ಲಿ, ಹೆಚ್ಚಿನ ಕೌಂಟರ್‌ಗಳನ್ನು ತೆರೆಯಬೇಕು. ಸೂಕ್ತ ಸ್ಪಂದನೆ ಅತೀ ಮುಖ್ಯ ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಪಡೆಯುವಂತಾಗಲು ಮಾಹಿತಿ ಶಿಕ್ಷಣದ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು. ಹಾಡಿಗಳು ಸೇರಿದಂತೆ ಎಲ್ಲೆಡೆ ಆರೋಗ್ಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನಹರಿಸಬೇಕು. ಕೋಪ್ಟಾ ಕಾಯ್ದೆಯ ಬಗ್ಗೆ ಮಾಹಿತಿ ಶಿಕ್ಷಣದ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಲಸಿಕಾ ಕಾರ್ಯಪಡೆ ಶೇಕಡಾವಾರು ಸಾಧನೆ, ಕ್ಷಯ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಜಿಲ್ಲಾ ಆರೋಗ್ಯ ಅಭಿಯಾನ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆನಂದ್ ಜಿಲ್ಲೆಯಲ್ಲಿ 214 ಕ್ಷಯರೋಗ ಕ್ರಿಯಾಶೀಲ ಪ್ರಕರಣಗಳಿದ್ದು, ಗುಣಪಡಿಸಲು ಶ್ರಮಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಜನವರಿಯಿಂದ ಇಲ್ಲಿಯವರೆಗೆ ಟೈಫಾಯ್ಡ್ 364 ಪ್ರಕರಣಗಳು, ನಾಯಿ ಕಚ್ಚುವಿಕೆಯಿಂದ 2912, ಹಾವು ಕಡಿತಕ್ಕೆ 190, ಅತಿಸಾರ ಭೇದಿಗೆ 1272 ಮಂದಿ, ಡೆಂಘೀ ಸಂಬಂಧಿಸಿ 194 ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ವಿಶಾಲ್ ಕುಮಾರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ವೈದ್ಯ ಡಾ.ಸೋಮಶೇಖರ್, ಡಾ.ಕುಶ್ವಂತ್ ಕೋಳಿಬೈಲು, ಡಾ.ಮಹೇಶ್, ಡಾ.ರಾಮಚಂದ್ರ ಕಾಮತ್ ಹಲವು ಮಾಹಿತಿ ನೀಡಿದರು. ತಾಲೂಕು ವೈದ್ಯಾಧಿಕಾರಿಗಳಾದ ಡಾ.ಚೇತನ್, ಡಾ.ಯತಿರಾಜು ಮತ್ತಿತರರು ಇದ್ದರು.