ಹೊಸಪೇಟೆ: ಜಿಲ್ಲೆ ಈಗಾಗಲೇ ಶೇ.96ರಷ್ಟು ಶೈಕ್ಷಣಿಕ ಫಲಿತಾಂಶದೊಂದಿಗೆ ರಾಜ್ಯದಲ್ಲಿ 10ನೇ ಸ್ಥಾನದಲ್ಲಿದೆ. ಉಳಿದ ಶೇ. 4 ರಿಂದ 5ರಷ್ಟು ಸುಧಾರಣೆ ಸಾಧಿಸುವ ಮೂಲಕ ಶೈಕ್ಷಣಿಕವಾಗಿ ರಾಜ್ಯದಲ್ಲೇ ಜಿಲ್ಲೆಯನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯಲು ಒಗ್ಗಟಾಗಿ ಶ್ರಮಿಸೋಣ ಎಂದು ಜಿಪಂ ಸಿಇಒ ಗರಿಮಾ ಪನ್ವಾರ್ ಕರೆ ನೀಡಿದರು.
ಜಿಲ್ಲೆಗೆ ವರ್ಗಾವಣೆಯಾಗಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಸಂತೋಷದ ಸಂಗತಿಯಾಗಿದೆ. ಅಕ್ಷರ ಆವಿಷ್ಕಾರ ನಂತರ ಆರಂಭವಾದ ಕಲಿಕಾ ಆಸರೆಯಂತಹ ಯೋಜನೆಗಳು ಹಲವು ವರ್ಷಗಳಾದರೂ ವಿದ್ಯಾರ್ಥಿಗಳ ಕಲಿಕೆಗೆ ನಿರಂತರವಾಗಿ ನೆರವಾಗುತ್ತಿರುವುದು ಸಂತಸದ ಸಂಗತಿ ಎಂದರು.
ಶಿಕ್ಷಕರು ತಾವು ಮಾಡುವ ಕೆಲಸದಲ್ಲಿ ಸಂತೃಪ್ತಿ ಕಾಣುವುದರ ಜತೆಗೆ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಶಿಕ್ಷಕರು ಇಂದು ಮಾಡುವ ಪರಿಶ್ರಮದ ಫಲಿತಾಂಶ ತಕ್ಷಣ ದೊರೆಯುವುದಿಲ್ಲ. ಆದರೆ ವರ್ಷಗಳ ನಂತರ ಅದೇ ಮಕ್ಕಳು ಉನ್ನತ ಹುದ್ದೆಗೇರಿ ತಮ್ಮ ಜೀವನ ರೂಪಿಸಿದ ಶಿಕ್ಷಕರನ್ನು ನೆನಪಿಸಿಕೊಳ್ಳುವಾಗ ಶಿಕ್ಷಕರ ಸೇವೆಯ ಸಾರ್ಥಕತೆ ಅರಿವಾಗುತ್ತದೆ ಎಂದು ಹೇಳಿದರು.ಮಕ್ಕಳ ಶೈಕ್ಷಣಿಕ ಪ್ರಗತಿಯ ಜತೆಗೆ ಅವರಲ್ಲಿ ಸನ್ಮಾರ್ಗ ಧನಾತ್ಮಕ ಚಿಂತನೆ ಹಾಗೂ ಜವಾಬ್ದಾರಿಯುತ ನಾಗರಿಕತ್ವದ ಗುಣ ಬೆಳೆಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ. ವಿಶೇಷವಾಗಿ ಶೈಕ್ಷಣಿಕ ಪ್ರಗತಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಗರಿಮಾ ಪನ್ವಾರ್ ಭರವಸೆ ನೀಡಿದರು.
ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಸಭೆಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.