)
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜನರ ಅಹವಾಲುಗಳನ್ನು ಆಲಿಸಿ ಪರಿಹರಿಸುವ ಮೂಲಕ ಸರ್ಕಾರವನ್ನು ಮನೆಬಾಗಿಲಿಗೆ ಕೊಂಡೊಯ್ಯಲು ಪ್ರಜಾಸೇವೆ ಎಂಬ ನೂತನ ಇಲಾಖೆ ಆರಂಭಿಸಲಾಗಿದೆ. ರೈತ ಚೈತನ್ಯ, ಗ್ರಾಮಾನುಭವ, ರೈತ ಮಿತ್ರ-ಬಡವರ ಬಂಧು, ಯುವ ಉದ್ಯೋಗ ಸೇತು, ಗ್ರಾಮೀಣ ಶೈಕ್ಷಣಿಕ ಹಬ್, ಭೂ ಗ್ಯಾರಂಟಿ, ನಶೆ ಮುಕ್ತ ಕರ್ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.ಬೆಳಗಾವಿ ನಗರದ ಸಂಚಾರ ದಟ್ಟಣೆ ನಿವಾರಣೆಗೆ ಸಂಕಮ್ ಹೋಟೆಲ್‌ನಿಂದ ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ರಾಣಿ ಚನ್ನಮ್ಮ ವೃತ್ತದವರೆಗೆ ಫ್ಲೈಓವರ್ ನಿರ್ಮಾಣಕ್ಕೆ ₹275.53 ಕೋಟಿ ಅನುದಾನ ಬಿಡುಗಡೆಯಾಗಿದೆ. ಆಗಸ್ಟ್ 17 ಟೆಂಡರ್ ಸ್ವೀಕರಿಸುವ ಕೊನೆಯ ದಿನವಾಗಿದೆ. ಎರಡನೇ ಹಂತದಲ್ಲಿ ರಾಣಿ ಚನ್ನಮ್ಮ ವೃತ್ತದಿಂದ ಬೋಗಾರ್‌ವೇಸ್ ವೃತ್ತದವರೆಗೆ ಫ್ಲೈಓವರ್ ನಿರ್ಮಾಣಕ್ಕೆ ₹240 ಕೋಟಿ ಅನುಮೋದನೆಯಾಗಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ತಾಂತ್ರಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಶಕ್ತಿ ಯೋಜನೆಯಡಿ 2023ರ ಜೂನ್ 11ರಿಂದ 2026ರ ಜುಲೈ 31ರವರೆಗೆ ಜಿಲ್ಲೆಯಲ್ಲಿ 61.79 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ₹1,599 ಕೋಟಿ ಮೊತ್ತದ ಶೂನ್ಯ ಟಿಕೆಟ್ ವಿತರಿಸಲಾಗಿದೆ. ಗೃಹಜ್ಯೋತಿಯಡಿ 10.33 ಲಕ್ಷ ಬಳಕೆದಾರರು ನೋಂದಾಯಿಸಿಕೊಂಡಿದ್ದು, ಗೃಹಲಕ್ಷ್ಮಿಯಡಿ 12.02 ಲಕ್ಷ ಫಲಾನುಭವಿಗಳಿಗೆ 31 ಕಂತುಗಳಿಗೆ ₹6,824 ಕೋಟಿ ನೇರ ನಗದು ವರ್ಗಾವಣೆ ಮಾಡಲಾಗಿದೆ. ಯುವನಿಧಿಯಡಿ 51,119 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅರ್ಹರಿಗೆ ₹130 ಕೋಟಿ ಪಾವತಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯ 7.52 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 7.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಶೇ.95ರಷ್ಟು ಸಾಧನೆಯಾಗಿದೆ. ಬೆಳೆ ವಿಮೆಯಡಿ 9,295 ರೈತರಿಗೆ ₹96.36 ಕೋಟಿ ಪರಿಹಾರ ವಿತರಿಸಲಾಗಿದೆ. ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾದ 587 ರೈತರಿಗೆ ₹78.55 ಲಕ್ಷ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.ಜಿಲ್ಲೆಯಲ್ಲಿ 28 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, 53ಕ್ಕೂ ಹೆಚ್ಚು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ₹8,320 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿವೆ. ಇವುಗಳಿಂದ ಸುಮಾರು 27 ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ₹75 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಟೆಂಡರ್ ಹಂತದಲ್ಲಿದೆ. ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ₹10 ಕೋಟಿ ಅನುದಾನ ಮಂಜೂರಾಗಿದೆ. ₹283 ಕೋಟಿ ಅನುದಾನದಡಿ 21 ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಯಲ್ಲಮ್ಮನಗುಡ್ಡಕ್ಕೆ ₹215.37 ಕೋಟಿ:ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮಾಜಸೇವೆ, ಕಲೆ-ಸಾಹಿತ್ಯ, ವೈದ್ಯಕೀಯ, ತಾಂತ್ರಿಕ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಸಚಿವ ಸತೀಶ ಜಾರಕಿಹೊಳಿ ಹಾಗೂ ಗಣ್ಯರು ಸನ್ಮಾನಿಸಿದರು. ಅಂಗಾಂಗ ದಾನದ ಮೂಲಕ ಮಾದರಿಯಾದ ಕುಟುಂಬಗಳನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಶಾಸಕ ಆಸೀಫ್ ಸೇಠ, ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಳಿ, ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ., ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.