ಜಿಲ್ಲೆಯ ರಾಜಕಾರಣದಲ್ಲಿ ಸಾಸನೂರ ಬಿ.ಎಸ್.ಪಾಟೀಲ, ಪ್ರಕಾಶ ರಾಠೋಡ, ಶರಣಪ್ಪ ಸುಣಗಾರ, ಮನೋಹರ ಐನಾಪೂರ ಅವರನ್ನು ಬೆಳೆಯಲು ಎಂ.ಬಿ.ಪಾಟೀಲರು ಬಿಡಲಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಅವರು ಸಚಿವ ಎಂ.ಬಿ.ಪಾಟೀಲರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮುದ್ದೇಬಿಹಾಳ : ಜಿಲ್ಲೆಯ ರಾಜಕಾರಣದಲ್ಲಿ ಸಾಸನೂರ ಬಿ.ಎಸ್.ಪಾಟೀಲ, ಪ್ರಕಾಶ ರಾಠೋಡ, ಶರಣಪ್ಪ ಸುಣಗಾರ, ಮನೋಹರ ಐನಾಪೂರ ಅವರನ್ನು ಬೆಳೆಯಲು ಎಂ.ಬಿ.ಪಾಟೀಲರು ಬಿಡಲಿಲ್ಲ. ಬೆಳೆಯುವವರನ್ನು ರಾಜಕೀಯದಿಂದ ನಿವೃತ್ತಿ ಹೇಗೆ ಮಾಡಿಸಬೇಕು ಎಂಬ ಕುತಂತ್ರ ಮಾಡುತ್ತಾರೆ. ಇವರು ಪಕ್ಷದಲ್ಲಿ ಕೊಂಡಿಮಂಚಣ್ಣನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಅವರು ಸಚಿವ ಎಂ.ಬಿ.ಪಾಟೀಲರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಯಕರ್ತರು, ಅಭಿಮಾನಿಗಳಿಗೆ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ಜೀವನದ ಏಳು ಬೀಳುಗಳನ್ನು ತೆರೆದಿಟ್ಟರು. ಸಚಿವ ಸ್ಥಾನಕ್ಕೆ ನನ್ನ ಹೆಸರು ಜೋರಾಗಿ ಕೇಳಿ ಬರುತ್ತಿರುವಾಗ ಯಶವಂತರಾಯಗೌಡ ಪಾಟೀಲರನ್ನು ಎಬ್ಬಿಸಿ ಕೂಡಿಸುವುದು, ಯಶವಂತರಾಯಗೌಡರ ಹೆಸರು ಹೆಚ್ಚು ಚರ್ಚೆಯಾಗುವಾಗ ಶಿವಾನಂದ ಪಾಟೀಲರನ್ನು ಎಬ್ಬಿಸುವುದು ಹೀಗೆ ಇನ್ನೊಬ್ಬ ಮತ್ತೊಬ್ಬರನ್ನು ಎಬ್ಬಿಸಿಕೊಡುವ ಮನಸ್ಥಿತಿ ಎಂ.ಬಿ.ಪಾಟೀಲರದ್ದಾಗಿದೆ. ಯಶವಂತರಾಯಗೌಡರ ನನ್ನ ಮಧ್ಯೆ ಜಗಳ ಹಚ್ಚಿಟ್ಟವರೇ ಎಂ.ಬಿ.ಪಾಟೀಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಲಿಮರವಾಗಿ ಚುಚ್ಚುವ ಕೆಲಸ:

ಅಣ್ಣ ತಮ್ಮಂದಿರಂತೆ ತಿಳಿದವರೇ ದ್ರೋಹ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲೂ ನಮ್ಮ ಪಕ್ಷದವರೇ ನನ್ನ ವಿರುದ್ಧವಾಗಿ ಹಣ ಹಂಚಿಕೆ ಮಾಡಿದರು. ನನ್ನ ರಾಜಕೀಯ ಗುರುಗಳು ಬಿ.ಎಂ.ಪಾಟೀಲರು. ಯಾರಿಗೆ ಸಸಿ ಹಾಕಿ ಬೆಳೆಸಿದ್ದೇವೆಯೋ ಅವರಿಂದು ಜಾಲಿಮರವಾಗಿ ಚುಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣ ಕೀಳುಮಟ್ಟಕ್ಕೆ ಇಳಿದಿದೆ. ರಾಜಕಾರಣ ಹರಿಯುವ ನೀರಾಗಿದೆ. ನೀವು ಕೊಟ್ಟ ಶಕ್ತಿಯಿಂದ ಮಂತ್ರಿಮಂಡಲದಲ್ಲಿ ಇವರೆಲ್ಲ ಸಚಿವರಾಗಿ ಕೂತಿದ್ದಾರೆ. ಪ್ರಾಂತವಾರು, ಜಾತಿವಾರು, ಪಕ್ಷದ ಸೇವೆ, ಗುಣಗಳು ಏನನ್ನೂ ನೋಡುವುದಿಲ್ಲ. ಮೇಲಿನವರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಾರೆ. ಆದರೆ, ಪಕ್ಷನಿಷ್ಠರನ್ನು ಹೈಕಮಾಂಡ್ ಗುರುತಿಸುವುದಿಲ್ಲ. ಸಂಚು ಮಾಡುವವರು, ಕ್ಷೀಣಗೊಳಿಸುವವರು, ಮೋಸ ವಂಚನೆ ಮಾಡುವವರು, ನಿಷ್ಠೆ ಇಲ್ಲದವರನ್ನು ದೊಡ್ಡವರು ಎಂದು ಯಾವತ್ತಿಗೂ ಕರೆಯುವುದಿಲ್ಲ. ಸ್ವಾರ್ಥ ಜೀವನ ಮಾಡುವರು. ಕೈಗೊಂಬೆಯಾಗಿ ಕೆಲಸ ಮಾಡೋದು ಬೇಡ. ನಮ್ಮ ಕ್ಷೇತ್ರದ ಸಂಪ್ರದಾಯ ಮುಂದುವರಿಸಿಕೊಂಡು ಹೋಗೋಣ ಕಾರ್ಯಕರ್ತರು ಬೇಸರಿಸಿಕೊಳ್ಳಬೇಡಿ ಎಂದು ಹೇಳಿದರು.

ಚುನಾವಣೆಯಲ್ಲಿ ನನ್ನ ವಿರುದ್ಧ ಫಂಡಿಂಗ್‌:

ಚುನಾವಣೆಯಲ್ಲಿ ನನ್ನ ವಿರುದ್ಧ ಬಿಜೆಪಿಯವರಿಗೆ ಫಂಡಿಂಗ್ ಮಾಡಿದ್ದರು. ಹಾಲುಮತ ಸಮಾಜದವರನ್ನು ವಿಜಯಪುರ ಜಿಪಂ ಅಧ್ಯಕ್ಷರನ್ನಾಗಿ ಮಾಡಬೇಕಾದಾಗ ಸಾಕಷ್ಟು ಸರ್ಕಸ್ ಮಾಡಬೇಕಾಯಿತು. ಕೆಂಚಪ್ಪ ಬಿರಾದಾರನನ್ನು ಜಿಪಂ ಉಪಾಧ್ಯಕ್ಷರನ್ನಾಗಿ ಮಾಡಬೇಕಾದಾಗ ಇವರು ವಿರೋಧಿಸಿದ್ದರು. ಎಸ್.ಎಂ.ಕೃಷ್ಣರ ಮುಂದೆ ರಾಜೀನಾಮೆ ಕೊಟ್ಟಾಗ ಜಿಪಂ ಉಪಾಧ್ಯಕ್ಷರಾಗಿ ಬಿರಾದಾರಗೆ ಅವಕಾಶ ಸಿಕ್ಕಿತ್ತು. ಒಬ್ಬರೇ ಇಬ್ಬರೇ ಎಂ.ಬಿ.ಪಾಟೀಲರಿಂದ ನನಗಷ್ಟೇ ಅಲ್ಲ ಹಲವರಿಗೆ ದ್ರೋಹವಾಗಿದೆ. ಆಗಿದೆ ಎಂದು ನಾಡಗೌಡರು ಹೇಳಿದರು.

ಯಾರನ್ನು ನನ್ನ ತಮ್ಮ ಎಂದು ಭಾವಿಸಿದ್ದೇನೋ ಅವರೆ ರಾಜಕೀಯ ದುರಾಸೆಯಿಂದ ನಮ್ಮನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ. ಇಂತಹ ಚಟುವಟಿಕೆ ಎಲ್ಲ ಪಕ್ಷದಲ್ಲೂ ನಡೆಯುತ್ತಿರಬಹುದು. ಅಭಿವೃದ್ಧಿಯಲ್ಲಿ ತೊಂದರೆ ಮಾಡುತ್ತಿರುವುದು, ಅನುದಾನದಲ್ಲಿ ತೊಂದರೆ ಮಾಡುತ್ತಿರುವುದು ಇದನ್ನು ನಾನು ನಮ್ಮ ಪಕ್ಷದೊಳಗಡೆ ಎದುರಿಸಬೇಕಾಗಿರುವುದು ದುರ್ದೈವ. ನನಗೆ ಸೋಲು ಗೌರವ ಕಡಿಮೆ ಮಾಡಲಿಲ್ಲ. ಪಕ್ಷಾತೀತವಾಗಿ ಗೌರವಿಸುತ್ತಿದ್ದೀರಿ. ಮುಂದೆ ಏನೇ ಬರಲಿ ನಿಮ್ಮೆಲ್ಲರ ಆಶೀರ್ವಾದ ಪಡೆದುಕೊಳ್ಳುವ ಕೆಲಸ ಮಾಡುತ್ತೇನೆ. ನೀವು ನನಗೆ ಸುದೀರ್ಘ ಅವಧಿಗೆ ಅವಕಾಶ ಕೊಟ್ಟಿದ್ದೀರಿ ನಿಮ್ಮ ಋಣ ತೀರಿಸಲು ಆಗುತ್ತಿಲ್ಲ ಎಂದು ಮನದಾಳದಿಂದ ಹೇಳಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ ಚವ್ಹಾಣ, ಬಾಲಾಜಿ ಶುಗರ್ಸ್ ನಿರ್ದೇಶಕ ರಾಹುಲ್ ಗೌಡ ಪಾಟೀಲ, ಬಿ.ಎಸ್.ಪಾಟೀಲ ಯಾಳಗಿ, ರಮೇಶ ಓಸ್ವಾಲ್, ಬಿ.ಕೆ.ಬಿರಾದಾರ, ಮಹೆಬೂಬ ಚೋರಗಸ್ತಿ, ದಾನಪ್ಪ ನಾಗಠಾಣ, ಅಶೋಕ ತಡಸದ, ಎಂ.ಎಸ್.ದೇಶಮುಖ, ಗುರು ದೇಶಮುಖ, ಶಿವಶಂಕರಗೌಡ ಹಿರೇಗೌಡರ, ಬಾಪುರಾಯ ದೇಸಾಯಿ, ಶಿವಪ್ಪ ತಾತರೆಡ್ಡಿ, ಎಸ್.ಎಸ್.ಹುಲ್ಲೂರ, ಅಕ್ಷತಾ ಚಲವಾದಿ, ಸತೀಶ ಓಸ್ವಾಲ, ಎಚ್.ಎಸ್.ಪಾಟೀಲ ಬಾವೂರ, ಮಲ್ಲಿಕಾರ್ಜುನ ಸಿದರೆಡ್ಡಿ, ಸಚೀನ್ ಪಾಟೀಲ, ರಾಜು ಕೊಂಗಿ, ಶ್ರೀಶೈಲ ಮರೋಳ, ಬಸವರಾಜ ಇಸ್ಲಾಂಪೂರ, ಶ್ರೀಕಾಂತ ಚಲವಾದಿ, ಗೋಪಿ ಮಡಿವಾಳರ, ಬಸನಗೌಡ ಬಿರಾದಾರ ಮೊದಲಾದವರು ಇದ್ದರು. ಶ್ರೀಶೈಲ ಹೂಗಾರ ನಿರೂಪಿಸಿದರು.

ಡಿಕೆಶಿ, ಸಿದ್ಧರಾಮಯ್ಯನವರು ನನ್ನನ್ನು ಮಂತ್ರಿ ಮಾಡುವ ಪ್ರಯತ್ನದಲ್ಲಿದ್ದರು. ಇವರು ನಮ್ಮ ಬೆಳವಣಿಗೆ ಸಹಿಸದೇ ದ್ರೋಹ ಮಾಡಿದ್ದಾರೆ. ನಾನು ಯಾವತ್ತೂ ಕುರ್ಚಿ, ಕಾರಿಗಾಗಿ ಆಸೆ ಪಟ್ಟವರಲ್ಲ. ಕುರ್ಚಿಯನ್ನು ಹೊಸದಾಗಿ ನಾನು ನೋಡುತ್ತಿಲ್ಲ. ರಾಜಕಾರಣವೇ ಜೀವನ ಎಂದು ತಿಳಿದವರಿಗೆ ಇದು ವ್ಯಾಪಾರ ಆಗಿದೆ. ನನ್ನ ವಿರುದ್ಧ ಮಾತನಾಡಲು ಜಿಪಂ ಸದಸ್ಯರನ್ನು ಛೂ ಬಿಡುತ್ತಾರೆ. ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ಆದರೆ, ಅವರ ಮಾತಿಗೆ ಯಾಕೆ ಬೆಲೆ ಕೊಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.

- ಸಿ.ಎಸ್‌,ನಾಡಗೌಡ ಅಪ್ಪಾಜಿ, ಶಾಸಕರು