ಸ್ಥಳಿಯ ಸಂಸ್ಥೆ ಗ್ರಾಪಂ ಮೀಸಲಾತಿ ಪ್ರಕಟಣೆಯಲ್ಲಿ ಚಿಕ್ಕಹಳ್ಳಿ ಗ್ರಾಪಂನ ದೊಡ್ಡಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನು ವಿರೋಧಿಸಿ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ಸ್ಥಳಿಯ ಸಂಸ್ಥೆ ಗ್ರಾಪಂ ಮೀಸಲಾತಿ ಪ್ರಕಟಣೆಯಲ್ಲಿ ಚಿಕ್ಕಹಳ್ಳಿ ಗ್ರಾಪಂನ ದೊಡ್ಡಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನು ವಿರೋಧಿಸಿ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಸಿದ್ದಾರೆ.ಬುಧವಾರ ದೊಡ್ಡಹಳ್ಳಿ ಗ್ರಾಮದ ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪರಿಶಿಷ್ಟ ಪಂಗಡದ ಮುಖಂಡರು ಸುದ್ದಿಗೋಷ್ಠಿ ನಡೆಸಿ , ಕಳೆದ ಬಾರಿ ನಮ್ಮ ಗ್ರಾಮದಲ್ಲಿ ಗ್ರಾಪಂ ಮೀಸಲಾತಿ ಪ್ರಕಟಣೆಯಾದಾಗ 4 ಸ್ಥಾನಗಳಲ್ಲಿ ಪರಿಶಿಷ್ಠ ಜಾತಿಯಲ್ಲಿ ಒಂದು ಸ್ಥಾನ, ಪರಿಶಿಷ್ಟ ಪಂಗಡದಲ್ಲಿ ಒಂದು ಸ್ಥಾನ ಹಾಗೂ ಸಾಮಾನ್ಯ ವರ್ಗದಲ್ಲಿ ಎರಡು ಸ್ಥಾನ ಸೇರಿ ನಾಲ್ಕು ಸ್ಥಾನ ನೀಡಲಾಗಿತ್ತು. ಆದರೆ ಇಂದು ಪ್ರಕಟಿಸಿರುವ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಎರಡು ಸ್ಥಾನ ಹಾಗೂ ಸಾಮಾನ್ಯ ಕ್ಷೇತ್ರದಲ್ಲಿ ಎರಡು ಸ್ಥಾನಗಳಿಗೆ ಮೀಸಲಾತಿ ನೀಡಿ ಸುಮಾರು 350 ರಿಂದ 400 ಮತದಾರರಿರುವ ಪರಿಶಿಷ್ಟ ಪಂಗಡಕ್ಕೆ ಒಂದೇ ಒಂದು ಸ್ಥಾನಕ್ಕೆ ಕೂಡ ಮೀಸಲಾತಿ ನೀಡದಿರುವುದು ದುರಾದೃಷ್ಠಕರ. ಮೀಸಲಾತಿ ಪರಿಷ್ಕರಣೆ ಮಾಡದಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಮತದಾನದಿಂದ ದೂರವಿದ್ದು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಅಂಜಿನಪ್ಪ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ಪ್ರತಿ ಗ್ರಾಪಂ ಚುನಾವಣೆಯಲ್ಲಿ ಕಡ್ಡಾಯವಾಗಿ ನೀಡಲಾಗುತ್ತಿತ್ತು.ಇ ದು ಯಾವ ರೀತಿ ಮೀಸಲಾತಿ ಸಿದ್ದಪಡಿಸಿದ್ದಾರೆ ಎಂಬುದು ತಹಸೀಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳಿಗೆ ಮಾತ್ರ ತಿಳಿಯಬೇಕಿದೆ. ಮತದಾನ ಮಾಡಲು ನಾವು ಬೇಕು ಚುನಾವಣೆಗೆ ಸ್ಫರ್ಧಿಸಲು ಮೀಸಲಾತಿ ನೀಡದ ಪಕ್ಷದಲ್ಲಿ ನಮ್ಮ ಗ್ರಾಮದ ಪರಿಶಿಷ್ಟ ಪಂಗಡದ ಎಲ್ಲಾ ಮತದಾರರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗುತ್ತೇವೆ ಎಂದರು.ಇದೇ ವೇಳೆ ಪರಿಶಿಷ್ಟ ಪಂಗಡದ ಮುಖಂಡರಾದ ಹನುಮಂತರಾಯಪ್ಪ, ಮುತ್ಯಾಲಪ್ಪ, ಗೋಪಿ, ರಾಮಾಂಜಿನಪ್ಪ, ಲಕ್ಷ್ಮಣ, ಪ್ರಕಾಶ, ಮಾರಪ್ಪ, ಹೊನ್ನೂರ ಸ್ವಾಮಿ, ಮುತ್ತಾಲಪ್ಪ ಆನೇಕ ಮುಖಂಡರು ಹಾಜರಿದ್ದರು.