ಕನ್ನಡಪ್ರಭ ವಾರ್ತೆ ಯಳಂದೂರು
ನಮ್ಮ ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರೂ ಇದ್ದಾರೆ. ಇಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ನಾಟಕ ಅಕಾಡೆಮಿಯಲ್ಲಿ ಸೂಕ್ತ ಸ್ಥಾನಮಾನ ಸೇರಿದಂತೆ ಜಿಲ್ಲೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿ, ಪ್ರಾತಿನಿಧ್ಯ ಕೊಡಿಸಲು ನಾನು ಶ್ರಮಿಸುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಪತ್ರಕರ್ತರ ಕೂಗಿಗೆ ನಾನು ಧ್ವನಿಯಾಗುತ್ತೇನೆ. ಯಳಂದೂರು ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಪತ್ರಕರ್ತರ ಭವನ ಹಾಗೂ ಶಿಕ್ಷಕರ ಭವನಕ್ಕೆ ಸೂಕ್ತ ನಿವೇಶನ ನೀಡಲು ಪಂಚಾಯಿತಿಯಲ್ಲಿ ಸಭೆ ನಡೆಸಿ ನಿರ್ಣಯ ಮಾಡಲಾಗಿದೆ. ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗವಾಗಿದೆ. ನಮ್ಮನ್ನು ತಿದ್ದುವ ಕೆಲಸವನ್ನು ಮಾಡುವ ಪತ್ರಕರ್ತರ ನೆರವಿಗೆ ರಾಜ್ಯ ಸರ್ಕಾರ ಸೂಕ್ತ ಸ್ಪಂದನೆ ನೀಡಿದ್ದು ಇನ್ನಷ್ಟು ಸೌಲಭ್ಯಗಳನ್ನು ಇವರಿಗೆ ಕೊಡಿಸಲು ಶ್ರಮಿಸುತ್ತೇನೆ. ಪಟ್ಟಣಕ್ಕೆ ಈಗಾಗಲೇ ೩೫ ಕೋಟಿ ರು. ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಡಯಾಲಿಸಿಸ್ ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕ್ರೀಡಾಂಗಣ ನಿರ್ಮಾಣ, ಅಗ್ನಿಶಾಮಕ ಠಾಣೆ, ಯಳಂದೂರು, ಬಿಳಿಗಿರಿರಂಗನಬೆಟ್ಟ, ಸಂತೆಮರಹಳ್ಳಿಯಲ್ಲಿ ಬಸ್ ನಿಲ್ದಾಣ, ಬೆಟ್ಟ, ವೈ.ಕೆ.ಮೋಳೆ, ಕೊಮಾರನಪುರ, ಕೊಳ್ಳೇಗಾಲದಿಂದ ಬೆಟ್ಟಕ್ಕೆ ತೆರಳುವ ರಸ್ತೆಗಳ ನಿರ್ಮಾಣಕ್ಕೂ ಈಗಾಗಲೇ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದ್ದು ಈ ಕಾಮಗಾರಿಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.ರಾಜ್ಯಪಾಲರು ಕೇಂದ್ರದ ಕೈಗೊಂಬೆ: ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ. ವಿನಾ ಕಾರಣ ರಾಜ್ಯದ ಸಿಎಂ ಸಿದ್ಧರಾಮಯ್ಯ ವಿರುದ್ಧ ಮುಡಾ ವಿಚಾರದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ಸರ್ಕಾರ ಇಲ್ಲದ ರಾಜ್ಯಗಳಲ್ಲಿ ಇಂತಹ ಅಸ್ತ್ರ ಉಪಯೋಗಿಸಿ ಸಂವಿಧಾನ ಬಾಹಿರ, ವಾಮ ಮಾರ್ಗದ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಸಿಎಂ ಇದಕ್ಕೆ ನಾನು ಹೆದರುವುದಿಲ್ಲ ಎಂಬ ಉತ್ತರವನ್ನು ನೇರವಾಗಿ ನೀಡಿದ್ದು ಕಾನೂನಾತ್ಮಕವಾಗಿ ಹೋರಾಟ ಮಾಡಲಿದ್ದಾರೆ. ನಾವು ಸಿಎಂ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಮಾತನಾಡಿ, ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಬೇಕು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಬಿಜೆಪಿ ಪಕ್ಷ ಇಲ್ಲಸಲ್ಲದ ಆರೋಪವನ್ನು ಮುಖ್ಯಮಂತ್ರಿಗಳ ವಿರುದ್ಧ ಮಾಡುತ್ತಿದೆ. ಇದು ರಾಜಕೀಯ ಪಿತೂರಿಯಾಗಿದ್ದು ಎಲ್ಲರೂ ಇದನ್ನು ಧಿಕ್ಕರಿಸುವ ಕೆಲಸ ಮಾಡಬೇಕು ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಜಿಲ್ಲೆಯ ಯಳಂದೂರು ಹಾಗೂ ಗುಂಡ್ಲುಪೇಟೆಯಲ್ಲಿ ಪತ್ರಿಕಾ ಭವನಗಳು ಇಲ್ಲ. ಈಗ ಯಳಂದೂರು ಪಟ್ಟಣದಲ್ಲಿ ಶಾಸಕರು ಭವನಕ್ಕೆ ನಿವೇಶನವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯವನ್ನು ನೀಡುವಂತೆ ರಾಜ್ಯ ಕಾರ್ಯಾಕಾರಣಿ ಸದಸ್ಯ ಗೂಳೀಪುರ ನಂದೀಶ್ ಹೆಚ್ಚು ಬಾರಿ ಈ ವಿಷಯ ಪ್ರಸ್ತಾಪಿಸಿದ್ದರು. ನಮ್ಮ ರಾಜ್ಯಾಧ್ಯಕ್ಷರು ಈ ಬಗ್ಗೆ ಧ್ವನಿ ಎತ್ತಿದ್ದರು. ಇವರ ಮನವಿ ಮೇರೆಗೆ ಸಿಎಂ ಅವರು ಘೋಷಣೆ ಮಾಡಿದ್ದಾರೆ. ಆದರೆ ಈ ಭರವಸೆ ಇನ್ನೂ ಈಡೇರಿಲ್ಲ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುವಂತೆ ಶಾಸಕರಿಗೆ ಮನವಿ ಮಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರನಾಯಕ, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಬ್ರಹಾಂ ಡಿಸಿಲ್ವ, ಪ್ರೀತಿ ಮಲ್ಲಿಕ್, ಸುಜಾದ್ ಬೇಗ್, ರುದ್ರಯ್ಯ, ಮಾಂಬಳ್ಳಿ ವಿಷ್ಣು, ಲಕ್ಷ್ಮಣ ರನ್ನು ಸನ್ಮಾನಿಸಲಾಯಿತು.ಪತ್ರಕರ್ತರ ಸಂಘದ ಜಿ.ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಮಂಡಳಿ ಸದಸ್ಯ ಗೂಳೀಪುರ ನಂದೀಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ವೈದ್ಯಾಧಿಕಾರಿ ಡಾ. ಶ್ರೀಧರ್, ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.-----
ಎರಡು ಚಿತ್ರ ಬಳಸಿಕೊಳ್ಳಲು ಮನವಿ೧೭೦೮ವೈಎಲ್ಡಿಪಿ೦೧
ಯಳಂದೂರು ಪಟ್ಟಣದ ತಾಪಂ ಕಚೇರಿಯಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಎ.ಆರ್. ಕೃಷ್ಣಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ಎಚ್.ವಿ. ಚಂದ್ರು ಸೇರಿದಂತೆ ಅನೇಕರು ಇದ್ದರು.೧೭೦೮ವೈಎಲ್ಡಿಪಿ೦೨ಯಳಂದೂರು ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು. ----- ಎರಡು ಚಿತ್ರಗಳನ್ನು ಬಳಸಿಕೊಳ್ಳಲು ಮನವಿ