ಕ್ರೀಡೆಯಿಂದ ಸದೃಢ ದೇಹ, ಉತ್ತಮ ಆರೋಗ್ಯ

KannadaprabhaNewsNetwork | Published : Sep 25, 2024 12:58 AM

ಸಾರಾಂಶ

ಹೊಳೆನರಸೀಪುರ: ಸದೃಢ ದೇಹ, ಉತ್ತಮ ಆರೋಗ್ಯ, ಏಕಾಗ್ರತೆಯಿಂದ ಕೂಡಿದ ಮನಸ್ಸು, ಮನೆ, ಕಚೇರಿ, ಸಮಾಜ ಹಾಗೂ ಇತರೆ ಸಂಘರ್ಷದ ಸಮಯದಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಮಾನ ಮನಸ್ಥಿತಿ ಕಾಪಾಡುವಲ್ಲಿ ಕ್ರೀಡೆ ಪ್ರಮುಖವಾಗಿದೆ ಎಂದು ಬಿಇಒ ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.

ಹೊಳೆನರಸೀಪುರ: ಸದೃಢ ದೇಹ, ಉತ್ತಮ ಆರೋಗ್ಯ, ಏಕಾಗ್ರತೆಯಿಂದ ಕೂಡಿದ ಮನಸ್ಸು, ಮನೆ, ಕಚೇರಿ, ಸಮಾಜ ಹಾಗೂ ಇತರೆ ಸಂಘರ್ಷದ ಸಮಯದಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಮಾನ ಮನಸ್ಥಿತಿ ಕಾಪಾಡುವಲ್ಲಿ ಕ್ರೀಡೆ ಪ್ರಮುಖವಾಗಿದೆ ಎಂದು ಬಿಇಒ ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಸನ ಹಾಗೂ ತಾಪಂ, ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ ಸಮೂಹ ಸಹಯೋಗದಲ್ಲಿ ಆಯೋಜಿಸಿರುವ 2024- 25ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನ ಇಂದಿನ ಜೀವನ ಶೈಲಿಯಲ್ಲಿ ಯೋಗ, ವ್ಯಾಯಾಮ, ಪ್ರಾಣಾಯಾಮ, ನಡಿಗೆ ಜತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡಲ್ಲಿ ಮಾನಸಿಕ ಒತ್ತಡ, ಧನಾತ್ಮಕ ಹಾಗೂ ಸಕರಾತ್ಮಕ ಆಲೋಚನೆಗಳು ಮತ್ತು ಕ್ರಿಯಾಶೀಲತೆಯಿಂದ ಕೂಡಿದ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ತಾಲೂಕು ಮಟ್ಟದ ಕ್ರೀಡಾಕೂಟದಿಂದ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ಗುರುತಿಸಿ ಉತ್ತೇಜಿಸಲು ಸಹಕಾರಿಯಾಗುತ್ತದೆ. ಯುವ ಪ್ರತಿಭೆಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡುತ್ತಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನಗಳಿಸುವ ಕ್ರೀಡಾಪಟುಗಳಿಗೆ ಉನ್ನತ ಶಿಕ್ಷಣ, ನೌಕರಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣಯ್ಯ, ರಾಜ್ಯಮಟ್ಟದ ಕ್ರೀಡಾಪಟು ಸುನಿಲ್ ಹಾಗೂ ವಿದ್ಯಾರ್ಥಿನಿಯರಾದ ಸಿಂಚನಾ, ಐಶ್ವರ್ಯ ಹಾಗೂ ಇತರರಿಂದ ಬಿಇಒ ಸೋಮಲಿಂಗೇಗೌಡ ಕ್ರೀಡಾಜ್ಯೋತಿ ಸ್ವೀಕರಿಸಿದರು.

ತಾಪಂ ತಾಂತ್ರಿಕ ಅಧಿಕಾರಿ ಗೋಪಾಲ್, ದೈಹಿಕ ಶಿಕ್ಷಕ ಪರಿವೀಕ್ಷಕ ಮಹೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಸುಜಾತ ಅಲಿ, ತಾಲೂಕು ಪ್ರಾಥಮಿಕ ಶಾ.ಶಿ.ಸಂ. ನಿರ್ದೇಶಕಿ ಚಂದ್ರಕಲಾ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್, ಶಿಕ್ಷಕರಾದ ಪ್ರಭು, ಪುಟ್ಟರಾಜು, ಸುಮಾರಾಣಿ, ಲೋಕೇಶ್, ಮಲ್ಲಿಕಾರ್ಜುನ್ ಇತರರು ಇದ್ದರು.

Share this article